ಮುಂಬೈ-ಮಂಗಳೂರು ಬಸ್ಸಿನಲ್ಲಿ ₹60 ಲಕ್ಷಕ್ಕೂ ಅಧಿಕ ಮೌಲ್ಯದ ನಗದು, ಚಿನ್ನ ವಶ; ಓರ್ವನ ಬಂಧನ!

ಭಟ್ಕಳ (ಉತ್ತರ ಕನ್ನಡ): ಮುಂಬೈ-ಭಟ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ 60 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಓರ್ವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಮಂಗಳವಾರ ರಾತ್ರಿ ಮುಂಬೈ ಮತ್ತು ಮಂಗಳೂರು ನಡುವೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಬಸ್ ನಿಲ್ದಾಣದಿಂದ ಹೊರಡುವ ಹಂತದಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಬಸ್ ಸಿಬ್ಬಂದಿಗೆ ನೀಲಿ ಸೂಟ್‌ಕೇಸ್ ನೀಡಿದ್ದು, ಭಟ್ಕಳದಲ್ಲಿ ಇರ್ಫಾನ್ ಎಂಬ ವ್ಯಕ್ತಿ ಸೂಟ್‌ಕೇಸ್ ಪಡೆಯುತ್ತಾನೆಂದು ಹೇಳಿದ್ದಾನೆ.
ಈ ನಡುವೆ ಆಕ್ರಮ ಹಣ ಸಾಗಾಟದ ಕುರಿತು ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹಣ ಸಂಬಂಧ ಪಟ್ಟ ವ್ಯಕ್ತಿಗೆ ತಲುಪುವಷ್ಟರಲ್ಲೇ, ಬಸ್ ನಲ್ಲಿದ್ದ ಹಣ ಹಾಗೂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು 49,98,400 ರೂ. ನಗದು ಮತ್ತು 400 ಗ್ರಾಂ ತೂಕದ 32 ಚಿನ್ನದ ಬಳೆಗಳು, ಒಂದು ಮೊಬೈಲ್ ಫೋನ್ ಮತ್ತು ಪೆನ್ ಡ್ರೈವ್’ನ್ನು ವಶಕ್ಕೆ ಪಡೆದಿದ್ದಾರೆ.