ಅಪ್ರಾಪ್ತ ಚಲಾಯಿಸುತ್ತಿದ್ದ ಕಾರು ಡಿಕ್ಕಿ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಮೂರು ವರ್ಷದ ಬಾಲಕಿ

ಗಾಂಧಿನಗರ: ಅಹಮದಾಬಾದ್‌ನ (Ahmedabad) ನೋಬಲ್‌ನಗರದಲ್ಲಿ ಅಪ್ರಾಪ್ತನೊಬ್ಬ ಚಲಾಯಿಸುತ್ತಿದ್ದ ಕಾರು (Car) ಮೂರು ವರ್ಷದ ಬಾಲಕಿಗೆ (Accident) ಡಿಕ್ಕಿಯಾಗಿದೆ.

ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸರೆಯಾಗಿದ್ದು, ಬಾಲಕಿಗೆ ಕಾರಿನ ಮುಂಭಾಗ ಡಿಕ್ಕಿಯಾಗಿ ಕೆಳಕ್ಕೆ ಬಿದ್ದಿದ್ದಾಳೆ. ಅದೃಷ್ಟವಶಾತ್ ಬಾಲಕಿ ಕಾರಿನ ನಡು ಭಾಗದಲ್ಲಿ ಕೆಳಗೆ ಬಿದ್ದಿದ್ದಾಳೆ. ಕಾರು ಮುಂದೆ ಚಲಿಸುತ್ತಿದ್ದಂತೆ, ಹಿಂಬದಿಯಿಂದ ಎದ್ದು ನಡೆದು ಬಂದಿದ್ದಾಳೆ. ಈ ವೇಳೆ ಅಪ್ರಾಪ್ತ ಕಾರು ನಿಲ್ಲಿಸಿ ಬಾಲಕಿ ಬಳಿ ಬಂದಿದ್ದಾನೆ
ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಗಳು ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಕಪಾಳಮೋಕ್ಷ ಮಾಡಿದ್ದಾರೆ. ಬಾಲಕನಿಗೆ ಕಪಾಳಮೋಕ್ಷ ಮಾಡುವ ವೀಡಿಯೋ ವೈರಲ್ ಆಗಿದೆ. ಈ ಸಂಬಂಧ ಚಾಲಕನ ವಿರುದ್ಧ ಅಹಮದಾಬಾದ್ ಪೊಲೀಸರು ಬಿಎನ್ಎಸ್ ಸೆಕ್ಷನ್ 281, 125(ಎ), ಮತ್ತು ಮೋಟಾರು ವಾಹನ ಕಾಯ್ದೆ ಸೆಕ್ಷನ್ 177, 184, 181 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಕಾರಿನ ಕೀಗಳನ್ನು ಅಪ್ರಾಪ್ತರಿಗೆ ನೀಡಬಾರದು. ಅವರಿಗೆ ಸಿಗದಂತೆ ಇಡಬೇಕು ಎಂದು ಒಬ್ಬರು ಅಪಘಾತದ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪವಾಡಗಳು ಸಂಭವಿಸುತ್ತವೆ ಎಂಬುದಕ್ಕೆ ಈ ವೀಡಿಯೊ ಪುರಾವೆಯಾಗಿದೆ. ಆದರೆ ಪ್ರತಿ ಬಾರಿಯೂ ಅದು ಸಂಭವಿಸಲ್ಲ. ರಸ್ತೆ ಆಟದ ಮೈದಾನವಲ್ಲ, ಪೋಷಕರು ಯಾವಾಗಲೂ ಮಕ್ಕಳ ಮೇಲೆ ಕಣ್ಣಿಡಬೇಕು ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು, ಅಪ್ರಾಪ್ತ ವಯಸ್ಕನಿಗೆ ಕಾರಿನ ಕೀ ಹೇಗೆ ಸಿಕ್ಕಿತು? ಅವನ ಪೋಷಕರನ್ನು ಶಾಶ್ವತವಾಗಿ ಜೈಲಿಗೆ ಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.