ಕಬ್ಬು ದರ ನಿಗದಿ ಹೋರಾಟ ಉದ್ವಿಗ್ನ: ಜಮಖಂಡಿಯ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮೇಲೆ ಕಲ್ಲುತೂರಾಟ; ವಾಹನಗಳ ಗಾಜು ಪುಡಿಪುಡಿ

ಬಾಗಲಕೋಟೆ: ಕಬ್ಬಿನ (Sugarcane) ದರ ನಿಗದಿಗೆ ಆಗ್ರಹಿಸಿ, ಕಬ್ಬು ಬೆಳೆಗಾರ ರೈತರು (Farmers) ನಡೆಸುತ್ತಿದ್ದ ಹೋರಾಟ ವಿಕೋಪಕ್ಕೆ ತಿರುಗಿ, ಕಲ್ಲು ತೂರಾಟ ನಡೆಸಿರುವ ಘಟನೆ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದಿದೆ.

ದರ ನಿಗದಿ ಹಾಗೂ ಬಾಕಿ ಬಿಲ್ ಪಾವತಿಸುವಂತೆ ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ ಹಾಗೂ ಮುಧೋಳ ಭಾಗದ ರೈತರು ಇಂದು ಪ್ರಭುಲಿಂಗೇಶ್ವರ ಕಾರ್ಖಾನೆ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ರು. ಈ ವೇಳೆ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಿಂತಿದ್ದ ವಾಹನಗಳು ಹಾಗೂ ಕಾರ್ಖಾನೆಯ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದೆ.
ಜಿಲ್ಲೆಯ ಜಮಖಂಡಿ (Jamakhandi) ತಾಲೂಕಿನ ಸಿದ್ಧಾಪೂರ ಗ್ರಾಮದಲ್ಲಿನ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆದಲ್ಲಿ ಈ ಘಟನೆ ನಡೆದಿದ್ದು, ಕಾರ್ಖಾನೆಯ ಮಾಲಿಕತ್ವಕ್ಕೆ ಸೇರಿದ ಬೊಲೆರೋ ವಾಹನ ಸೇರಿ ಇತರೇ ವಾಹನಗಳ ಗಾಜು ಪುಡಿ ಪುಡಿಯಾಗಿವೆ. ರೈತರು ನಡೆಸುತ್ತಿದ್ದ ಪ್ರತಿಭಟನೆ ಯಾರೋ ಕಿಡಿಗೇಡಿಗಳಿಂದ ಈ ಕಲ್ಲು ತೂರಾಟ ಕೃತ್ಯ ನಡೆಸಿದ್ದಾರೆ.
ಇದು ರೈತರಿಂದ ಆಗಿರುವ ಘಟನೆ ಅಲ್ಲ ಎಂದು ಕಬ್ಬು ಬೆಳೆಗಾರರು ಹೇಳ್ತಿದ್ರೆ, ಕಲ್ಲು ತೂರಾಟ ನಡೆಸಿದರಾರು ಎಂದು ಪರಿಶೀಲಿಸಿಲು ಸ್ಥಳಕ್ಕೆ ಜಮಖಂಡಿ ಪೊಲೀಸರು ಆಗಮಿಸಿ, ಸ್ಥಳ ಪರಿಶೀಲನೆ ಮಾಡಿ, ಕಾರ್ಖಾನೆ ಆವರಷದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ. ಸಧ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆ ಮುಂದುವರೆದಿದೆ. ಕಬ್ಬಿನ ಬಾಕಿ ಬಿಲ್‌ಪಾವತಿ ಹಾಗೂ ಪ್ರಸಕ್ತ ಸಾಲಿಗೆ ಕಬ್ಬಿನ ದರ ನಿಗದಿಪಡಿಸಿ ಎಂದು ಆಗ್ರಹಿಸಿ ನಡೆಯುತ್ತಿದ್ದ ರೈತರ ಪ್ರತಿಭಟನೆ ವೇಳೆ ಘಟನೆ ನಡೆದಿದೆ ಎನ್ನಲಾಗ್ತಿದೆ
ಹುಕ್ಕೇರಿ ಬಂದ್‌ಗೆ ಕರೆ
ಕಬ್ಬಿಗೆ ಪ್ರತಿ ಟನ್‌ಗೆ 3,500 ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ನಡೆದಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಕಳೆದ 5 ದಿನಗಳಿಂದ ನಡೆಯುತ್ತಿರುವ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ಸಾವಿರಾರು ರೈತರು ಕಳೆದ 5 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೆ, ಈ ಹೋರಾಟ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದೆ. ರೈತರ ಹೋರಾಟಕ್ಕೆ ಸರಕಾರ ಸ್ಪಂದಿಸದ ಕಾರಣ ಚಿಕ್ಕೋಡಿ ಪಟ್ಟಣ ಸೇರಿ ವಿವಿಧೆಡೆ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಹುಕ್ಕೇರಿ ಪಟ್ಟಣ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಇನ್ನು ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಪ್ರತಿಭಟನೆ ಕಾವೇರುವ ಸಾಧ್ಯತೆ ಇದೆ. ರೈತರ ಸಮಸ್ಯೆ ಬಗೆ ಹರಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.