ಆಸಿಡಿಟಿ ಎಂದು ಈ ಔಷಧಿ ತಿಂದ್ರೆ ಕಾದಿದೆ ಕ್ಯಾನ್ಸರ್-ಕೇಂದ್ರ ಆದೇಶ

ಹೊಸದಿಲ್ಲಿ: ಆಮ್ಲೀಯತೆ (ಆಯಸಿಡಿಟಿ)ಗೆ ಔಷಧಿಯಾಗಿ ಸಾಮಾನ್ಯವಾಗಿ ಬಳಕೆಯಾಗುವ ರ‍್ಯಾನಿಟಿಡೈನ್ (ranitidine)ನಲ್ಲಿರುವ ಕಾನ್ಸರ್ ಗೆ ಕಾರಣವಾಗಬಹುವಾದ ಎನ್‌ಡಿಎಂಎ (ಎನ್-ನಿಟ್ರೋಸೋಡಿಮಿಥಿಲಮೈನ್) ರಾಸಾಯನಿಕದ ಪ್ರಮಾಣದ ಬಗ್ಗೆ ನಿಗಾವಿರಿಸುವಂತೆ ಕೇಂದ್ರೀಯ ಔಷಧಿ ಮಾನಕ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಓ) ಶನಿವಾರ ಆದೇಶಿಸಿದೆ.

ಮುನ್ನೆಚ್ಚರಿಕೆ. ಕ್ರಮವಾಗಿ ರ‍್ಯಾನಿಟಿಡೈನ್ ಔಷಧಿಯ ವಾಯಿದೆಯ ಅವಧಿಯನ್ನು ಕಡಿಮೆಗೊಳಿಸುವಂತೆಯೂ ಅದು ಸಲಹೆ ಮಾಡಿದೆ.
2025ರ ಎಪ್ರಿಲ್ 28ರಂದು ನಡೆದ 92ನೇ ಔಷಧಿ ತಾಂತ್ರಿಕ ಸಲಹಾ ಮಂಡಳಿ (ಡಿಟಿಎಬಿ)ಯ ಶಿಫಾರಸಿನ ಹಿನ್ನೆಲೆಯಲ್ಲಿ ಭಾರತೀಯ ಡ್ರಗ್ಸ್ ಕಂಟ್ರೋಲ್ ಜನರಲ್ (ಡಿಜಿಸಿಐ) ಡಾ. ರಾಜೀವ್ ರಘುವಂಶಿ ಅವರು ಈ ಕ್ರಮ ಕೈಗೊಂಡಿದ್ದಾರೆ.
ರ‍್ಯಾನಿಟಿಡೈನ್ ನ ಪರಿಶುದ್ಧತೆಯ ಕುರಿತು ಉಂಟಾಗಿರುವ ಕಳವಳಗಳ ಬಗ್ಗೆ ಅಧ್ಯಯನ ನಡೆಸಲು ಕಳೆದ ವರ್ಷದ ಡಿಸೆಂಬರ್ ನಲ್ಲಿ ರಚನೆಯಾದ ತಜ್ಞರ ಸಮಿತಿಯು ಸಲ್ಲಿಸದ ವರದಿಯನ್ನು ಮಂಡಳಿಯು ಪರಾಮರ್ಶಿಸಿತ್ತು. ಅದನ್ನು ಆಧರಿಸಿ ಈ ವಿಷಯದ ಕುರಿತ ಎಲ್ಲಾ ಅಂಶಗಳ ಬಗ್ಗೆ ವಿಸ್ತೃತ ಸಮಿತಿಯನ್ನು ರಚಿಸುವಂತೆ ಡಿಟಿಎಬಿ ಕರೆ ನೀಡಿತ್ತು.
ಇದರ ಜೊತೆಗೆ ಎನ್‌ಡಿಎಂಎ ರಾಸಾಯನಿಕದ ಉಪಸ್ಥಿತಿಯಿರುವ ಹಿನ್ನೆಲೆಯಲ್ಲಿ ರ‍್ಯಾನಿಟಿಡೈನ್ ನ ದೀರ್ಘಾವಧಿಯ ಸುರಕ್ಷತೆಯ ಹೆಚ್ಚಿನ ಅಧ್ಯಯನವನ್ನು ನಡೆಸಬೇಕೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶಿಫಾರಸು ಮಾಡಿದೆ.
ಅಂತರಾಷ್ಟ್ರೀಯ ಕ್ಯಾನ್ಸರ್ ಕುರಿತ ಸಂಶೋಧನಾ ಏಜೆನ್ಸಿಯ ಪ್ರಕಾರ ರಾನಿಟಿಡೈನ್ ಗ್ರೂಪ್ 2ಎ ಕ್ಯಾರ್ಸಿನೊಜೆನ್ (ಕ್ಯಾನ್ಸರ್ ಕಾರಕ) ಶ್ರೇಣಿಗೆ ಬರುತ್ತದೆ. ಆದುದರಿಂದ ಇದು ಮಾನವನಿಗೆ ಕ್ಯಾನ್ಸರ್ ಕಾರಕವಾಗುವ ಸಂಭವವಿದೆ.
ಫೆಮೊಟೊಡೈನ್ ಹಾಗೂ ಪ್ಯಾಂಟೊಪ್ರಾರೊಲ್ ನಂತಹ ಸುರಕ್ಷಿತ ಪರ್ಯಾಯ ಔಷಧಿಗಳಿರುವುದರಿಂದ ರ‍್ಯಾನಿಟಿಡೈನ್ ಅನ್ನು ಔಷಧಿಯಾಗಿ ಶಿಫಾರಸು ಮಾಡಕೂಡದು ಎಂದು ದಿಲ್ಲಿ ಏಮ್ಸ್‌ನ ಕ್ಯಾನ್ಸರ್ ತಜ್ಞ ಡಾ. ಅಭಿಷೇಕ್ ಶಂಕರ್ ಹೇಳಿದ್ದಾರೆ.
