ಕಿದ್ವಾಯಿ ಆಸ್ಪತ್ರೆಯಿಂದ ಕ್ಯಾನ್ಸರ್ ಪೀಡಿತ ಕೈದಿ ಪರಾರಿ

ಬೆಂಗಳೂರು ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದು, ಆರೋಪಿಯ ಪರಾರಿ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಪರಾರಿಯಾದ ಕೈದಿಯ ಹೆಸರನ್ನು ಚೇತನ್ ಕಲ್ಯಾಣಿ ಎಂದು ಗುರುತಿಸಲಾಗಿದೆ. ವಿಜಯಪುರ ಮೂಲದ ಚೇತನ್ ಕಲ್ಯಾಣಿ, ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ತೀರ್ಪು ಬಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಕಳೆದ ಆಗಸ್ಟ್ 3 ರಂದು ವಿಜಯಪುರ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಕ್ಯಾನ್ಸರ್ ಪೀಡಿತನಾದ ಕೈದಿ
ಚೇತನ್ ಕಲ್ಯಾಣಿ ಬಾಯಿಯ ಕ್ಯಾನ್ಸರ್‌ನಿಂದ ತೀವ್ರವಾಗಿ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಕಾರಾಗೃಹ ವೈದ್ಯರ ಸಲಹೆ ಮೇರೆಗೆ, ಅವರನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಗಸ್ಟ್ 21ರಿಂದ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ.
ಪರಾರಿಯಾಗಿದ್ದು ಹೇಗೆ ?
ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ಆಸ್ಪತ್ರೆ ಸಿಬ್ಬಂದಿ ಮತ್ತು ಜೈಲು ರಕ್ಷಕರ ಗಮನ ತಪ್ಪಿಸಿ ಚೇತನ್ ಕಲ್ಯಾಣಿ ಪರಾರಿಯಾದ. ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ ಮಾತನಾಡಲು ಸಾಧ್ಯವಾಗದಿದ್ದರೂ, ಅದನ್ನೇ ದಾಳವಾಗಿ ಬಳಸಿಕೊಂಡು ಆಸ್ಪತ್ರೆಗೆಯಿಂದ ಕಣ್ಮರೆಯಾದ. ಆಸ್ಪತ್ರೆ ಸಿಬ್ಬಂದಿ ಆತನನ್ನು ತಡೆಹಿಡಿಯಲು ಪ್ರಯತ್ನಿಸಿದರೂ, ಕೈದಿಯನ್ನು ತಡೆಯುವಲ್ಲಿ ವಿಫಲರಾದರು.
ಪ್ರಕರಣ ದಾಖಲು
ಈ ಸಂಬಂಧ, ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ರಘು ಕೊಟ್ಟ ದೂರಿನ ಆಧಾರದ ಮೇಲೆ, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 262ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ಪ್ರಸ್ತುತ ಸಿದ್ದಾಪುರ ಪೊಲೀಸರು ಘಟನಾ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿ, ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಯ ಹಾದಿ ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ಆರಂಭವಾಗಿದೆ.
