ಕೆನಡಾ: ಕಾರಿನ ಮೇಲೆ ಮೂತ್ರ ವಿಸರ್ಜನೆ ತಡೆದಿದ್ದಕ್ಕೆ ಭಾರತೀಯ ಉದ್ಯಮಿ ಅರ್ವಿ ಸಿಂಗ್ ಸಾಗೂ ಹತ್ಯೆ; ಆರೋಪಿ ಅರೆಸ್ಟ್

ಒಟ್ಟಾವಾ: ತನ್ನ ಕಾರಿನ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ವಿರೋಧಿಸಿದ್ದಕ್ಕೆ ಭಾರತೀಯ ಮೂಲದ ಉದ್ಯಮಿಯನ್ನು ಹತ್ಯೆ ಮಾಡಿರುವ ಘಟನೆ ಕೆನಡಾದಲ್ಲಿ (Canada) ನಡೆದಿದೆ.

ಅರ್ವಿ ಸಿಂಗ್ ಸಾಗೂ (55) ಹತ್ಯೆಯಾದ ಉದ್ಯಮಿ. ಅ.9 ರಂದು ಎಡ್ಮಂಟನ್‌ನಲ್ಲಿ ಇವರ ಮೇಲೆ ಹಲ್ಲೆ ನಡೆದಿತ್ತು. ಗೆಳತಿ ಜೊತೆ ಊಟಕ್ಕೆ ಹೋಗಿದ್ದರು. ಊಟದ ನಂತರ ತನ್ನ ಗೆಳತಿಯೊಂದಿಗೆ ಕಾರಿಗೆ ಹಿಂತಿರುಗುತ್ತಿದ್ದಾಗ, ಅಪರಿಚಿತ ವ್ಯಕ್ತಿ ಕಾರಿನ ಮೇಲೆ ಮೂತ್ರ ವಿಸರ್ಜಿಸುತ್ತಿದ್ದ. ಅದಕ್ಕೆ ಉದ್ಯಮಿ ಆಕ್ಷೇಪ ವ್ಯಕ್ತಪಡಿಸಿದರು
ಹೇ, ನೀವು ಏನು ಮಾಡುತ್ತಿದ್ದೀರಿ? ಎಂದು ಸಾಗೂ ಅಪರಿಚಿತನನ್ನು ಕೇಳಿದ್ದಾರೆ. ಅದಕ್ಕೆ ಆ ವ್ಯಕ್ತಿ, ‘ನನಗೆ ಏನು ಬೇಕೋ ಅದು’ ಎಂದು ಉತ್ತರಿಸಿದ್ದಾನೆ. ನಂತರ ಆತ ಸಾಗೂ ಬಳಿಗೆ ಬಂದು ತಲೆಗೆ ಹೊಡೆದಿದ್ದಾನೆ. ಸಾಗೂ ನೆಲಕ್ಕೆ ಬಿದ್ದಾಗ, ಆತನ ಗೆಳತಿ 911 ಗೆ ಕರೆ ಮಾಡಿದ್ದಾಳೆ. ವೈದ್ಯರು ಸ್ಥಳಕ್ಕೆ ಬಂದಾಗ, ಸಾಗೂ ಪ್ರಜ್ಞಾಹೀನರಾಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜೀವರಕ್ಷಕ ವ್ಯವಸ್ಥೆಯಡಿಯಲ್ಲಿ ಇರಿಸಲಾಯಿತು. ಆದರೆ, ಐದು ದಿನಗಳ ನಂತರ ಮೃತಪಟ್ಟಿದ್ದಾರೆ.
ಆರೋಪಿಯನ್ನು ಕೈಲ್ ಪ್ಯಾಪಿನ್ ಎಂದು ಗುರುತಿಸಲಾಗಿದ್ದು, ಎಡ್ಮಂಟನ್ ಪೊಲೀಸರು ಆತನನ್ನು ಬಂಧಿಸಿ, ತೀವ್ರ ಹಲ್ಲೆ ಆರೋಪ ಹೊರಿಸಿದ್ದಾರೆ.