ಟ್ರಾಫಿಕ್‌ನಲ್ಲಿ ಸೋಫಾ ತಿರುಗಿಸಿ ವಿಶ್ರಾಂತಿ ಪಡೆಯಬಹುದು: ಬೆಂಗಳೂರಿನ ಸಂಚಾರ ದುಃಸ್ವಪ್ನಕ್ಕೆ ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆ

ಬೆಂಗಳೂರು; ಬೆಂಗಳೂರಿನ ರಸ್ತೆ ಸಮಸ್ಯೆ ಮುಗಿಯದ ಕಥೆ, ದಿನಕ್ಕೊಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತ ಇರುತ್ತದೆ. ಜನ ಪ್ರತಿದಿನ ಸರ್ಕಾರಕ್ಕೆ ರಸ್ತೆ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಲದಲ್ಲಿ ತರಾಟೆಗೆ ತೆಗೆದುಕೊಳ್ಳತ್ತ ಇರುತ್ತಾರೆ. ಅದ್ರೂ ಯಾವುದಕ್ಕೂ ಸರ್ಕಾರ ಕೇರ್ ಮಾಡುತ್ತಿಲ್ಲ. ಇನ್ನು ಕೊನೆಗೆ ಉಳಿದಿರುವುದು ಒಂದೇ ದಾರಿ, ಜನರೇ ಗುಂಡಿ ಮುಚ್ಚುವುದು. ಈಗ ಅದೇ ಕಾರ್ಯ ನಡೆಯುತ್ತಿರುವುದು. ಇಲ್ಲೊಂದು ಅಂಥಹದೇ ಪೋಸ್ಟ್ ರೆಡ್ಡಿಟ್ನಲ್ಲಿ ವೈರಲ್ ಆಗಿದೆ. ಈ ಪೋಸ್ಟ್ಗೆ ತುಂಬಾ ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಶಿಥಿಲಗೊಂಡ ರಸ್ತೆಗಳ ಬಗ್ಗೆ ಸಾರ್ವಜನಿಕರು ಅಸಮಾಧನ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಈ ಪೋಸ್ಟ್ ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲೊಂದು ರಸ್ತೆ ಗುಂಡಿಯನ್ನು ಹಳೆಯ ಸೋಫಾದಿಂದ ಮುಚ್ಚಿರುವ ಪೋಸ್ಟ್ಗೆ ಭಾರೀ ವೈರಲ್ ಆಗಿದೆ.

ಇನ್ನು ಪೋಸ್ಟ್ನಿಂದ ಹೊಸ ಚರ್ಚೆಗಳು ಶುರುವಾಗಿದೆ. ಕೆ.ಆರ್. ರಸ್ತೆಯ ಬಳಿಯ ಒಂದು ಪ್ರದೇಶದಲ್ಲಿ ಈ ದೃಶ್ಯ ಕಂಡು ಬಂದಿದೆ. ಈ ಪೋಸ್ಟ್ನ್ನು ರೆಡ್ಡಿಟ್ ಹಂಚಿಕೊಂಡಿದ್ದು, ಬಳಕೆದಾರರು ಈ ರಸ್ತೆ ಗುಂಡಿಯನ್ನು ನೋಡಿ, ಅಬ್ಬಾಬ್ಬ ಈ ಗುಂಡಿ ಎಷ್ಟು ಆಳವಾಗಿದೆ. ಒಂದು ದ್ವಿಚಕ್ರ ವಾಹನವು ಬೀಳುವಷ್ಟು ಅಗಲವಿದೆ ಎಂದು ಹೇಳಿದ್ದಾರೆ. ಈ ಪೋಸ್ಟ್ನಲ್ಲಿ ತಿಳಿಸಿರುವ ಪ್ರಕಾರ, ರಸ್ತೆಗೆ ಶಾಶ್ವತ ಪರಿಹಾರ ಸಿಗದ ಕಾರಣ ಸ್ಥಳೀಯ ಅಂಗಡಿಯವರು ತಾತ್ಕಾಲಿಕವಾಗಿ ಈ ಪರಿಹಾರವನ್ನು ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸರು ಕೂಡ ಜನರಿಗೆ ಇಲ್ಲಿ ಗುಂಡಿದೆ ಎಂದು ಎಚ್ಚರಿಸಲು ಬ್ಯಾರಿಕೇಡ್ ಕೂಡ ಹಾಕಿದ್ದಾರೆ. ಆದರೆ ಗುಂಡಿ ಮುಚ್ಚಬೇಕು ಎನ್ನುವ ಮನಸ್ಸು ಯಾರು ಮಾಡಿಲ್ಲ, ಪಕ್ಕದಲ್ಲಿ ವ್ಯಾಪಾರ ಮಾಡುವ ಜನರು ಸಹ ಆ ಗುಂಡಿಯನ್ನು ಮುಚ್ಚುವ ಯೋಚನೆಯನ್ನು ಮಾಡಿಲ್ಲ ಎಂದು ಈ ಪೋಸ್ಟ್ನಲ್ಲಿ ಹೇಳಲಾಗಿದೆ. ಈ ಬಗ್ಗೆ ಸಂಬಂಧಪಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದಾರೆ. ನೀವು ಬಿಬಿಎಂಪಿ ಅಥವಾ ಗ್ರೇಟರ್ ಬೆಂಗಳೂರಿಗೂ ಈ ಬಗ್ಗೆ ದೂರು ನೀಡಿದ್ರು ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಮೊದಲನೆಯದಾಗಿ ರಸ್ತೆಗಳು ಇಷ್ಟೊಂದು ಕೆಟ್ಟದಾಗಿರಬಾರದು, ಮುಂದಿನ ಹತ್ತು ವರ್ಷಗಳ ಕಾಲ ಈ ಬದಲಾವಣೆಗಳು ಆಗುವುದಿಲ್ಲ. ಒಂದಾ ಸರ್ಕಾರ ಈ ಬಗ್ಗೆ ಬದಲಾವಣೆ ತರಬೇಕು. ಇಲ್ಲ ಜನರೇ ಬದಲಾವಣೆಯನ್ನು ಮಾಡಬೇಕು ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಆಧುನಿಕ ಸಮಸ್ಯೆಗಳಿಗೆ ಕೆಲವು ರೀತಿಯ ಪರಿಹಾರದ ಅಗತ್ಯವಿದೆ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಯಾರಾದರೂ ಸೋಫಾವನ್ನು ತಿರುಗಿಸಿ ಟ್ರಾಫಿಕ್ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಬಹುದು ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.