ಅಶ್ಲೀಲ ಮೆಸೇಜ್ ಕಳಿಸಿದ ಯುವಕನಿಗೆ ಬುದ್ಧಿ ಹೇಳಿ ಕ್ಷಮಿಸಿದ ಸಂಜು ಬಸಯ್ಯ: ದರ್ಶನ್‌ಗಿಂತ ಭಿನ್ನ ಆದರ್ಶ ಉದಾಹರಣೆ

ಬೆಳಗಾವಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು. ನಟಿ ಹಾಗೂ ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದಕ್ಕೆ ದರ್ಶನ್ ಅಂಡ್ ಗ್ಯಾಂಗ್ ಭೀಕರವಾಗಿ ಹತ್ಯೆ ನಡೆಸಿದ ಆರೋಪ ಈಗಲೂ ಇದೆ. ಇದೇ ರೀತಿ ಪ್ರಕರಣವೊಂದು ಈಗ ಬೆಳಗಾವಿಯಲ್ಲಿ ನಡೆದಿದೆ. ಆದ್ರೆ ಪತ್ನಿಗೆ ಇನ್ಸ್ಟಾಗ್ರಾಮ್ ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಯುವಕನಿಗೆ ಬುದ್ಧಿ ಹೇಳಿ ಕಳುಹಿಸುವ ಮೂಲಕ ಹಾಸ್ಯನಟ ಸಂಜು ಬಸಯ್ಯ ದರ್ಶನ್‌ಗೆ ಮಾದರಿಯಾಗಿದ್ದಾರೆ.

ಸಂಜು ಬಸಯ್ಯ ಅವರ ಪತ್ನಿ ನಟಿ ಪಲ್ಲವಿ ಸಂಜು ಬಸಯ್ಯ ಅವರಿಗೆ ವಿಜಯನಗರ ಮೂಲದ ಮನೋಜ್ ಎಂಬ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವಕ ಇನ್ಸ್ಟಾಗ್ರಾಮ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದ.
ಅಶ್ಲೀಲ ಮೆಸೇಜ್ ಜೊತೆಗೆ ಅಶ್ಲೀಲ ಫೋಟೊಗಳನ್ನೂ ಕಳಿಸಿದ್ದ. ಇದರಿಂದ ಸಂಯಮ ಕಳೆದುಕೊಳ್ಳದ ಸಂಜು ಬಸಯ್ಯ ಅವರು ಬೈಲಹೊಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಅಶ್ಲೀಲ ಸಂದೇಶ ಕಳಿಸಿದ ಯುವಕನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಯುವಕನ ಭವಿಷ್ಯ ಹಾಳಾಗಬಾರದೆಂದು ಸಂಜು ಬಸಯ್ಯ ಅವರು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಇಂತಹದೇ ಪ್ರಕರಣದಲ್ಲಿ ಸದ್ಯ ಬಂಧಿಯಾಗಿದ್ದ ನಟ ದರ್ಶನ್‌ಗೆ ಸಂಜು ಬಸಯ್ಯ ಮಾದರಿಯಾಗಿದ್ದಾರೆ.
ಇದೀಗ ಯುವಕ, ನಾನು ಬಹಳ ದಿವಸದಿಂದ ಇನ್‌ಸ್ಟಾಗ್ರಾಂ ಬಳಸುತ್ತಿದ್ದೆ. ಪಲ್ಲು ಸಂಜು ಅಫಿಷಿಯಲ್ ಖಾತೆಗೆ ಕೆಟ್ಟ ಕಾಮೆಂಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸಿದ್ದೆ. ಈ ಬಗ್ಗೆ ಸಂಜು ಬಸಯ್ಯ ಅವರು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ನನ್ನನ್ನ ಕರೆಸಿ, ಶಿಕ್ಷೆ ಕೊಟ್ಟಿದ್ದಾರೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ನಾನು ಮಾಡಿದಂತೆ ಇನ್ಯಾರೂ ಈ ರೀತಿ ಮಾಡಬೇಡಿ. ಎಲ್ಲರಲ್ಲೂ ಕ್ಷಮೆ ಕೇಳ್ತೀನಿ ಎಂದು ತಪ್ಪೊಪ್ಪಿಕೊಂಡಿದ್ದಾನೆ.
