ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಸ್-ಲಾರಿ ಡಿಕ್ಕಿ; 20 ಸಾವು, 24 ಜನರಿಗೆ ಗಾಯ

ಹೈದರಾಬಾದ್: ತೆಲಂಗಾಣದ (Telangana) ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದಲ್ಲಿ ಹೈದರಾಬಾದ್-ಬಿಜಾಪುರ (Hyderabad-Bijapur highway) ಹೆದ್ದಾರಿಯಲ್ಲಿ ಸೋಮವಾರ, ಬಸ್ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. 24 ಜನ ಗಾಯಗೊಂಡಿದ್ದಾರೆ. ಜಲ್ಲಿ ತುಂಬಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ. ಟ್ರಕ್ ಅತಿ ವೇಗದಲ್ಲಿ ಚಲಿಸುತ್ತಿದ್ದುದೇ ಅಪಘಾತಕ್ಕೆ (Road Accident) ಕಾರಣ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಅಪಘಾತ ನಡೆದ ಸ್ಥಳದ ಬಳಿ ಅಪಾಯಕಾರಿ ತಿರುವೊಂದು ಇದೆ. ಈ ಜಾಗದಲ್ಲಿ ಅತಿ ವೇಗದಲ್ಲಿ ಬಂದ ಲಾರಿ ಬಸ್ಗೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿದ್ದ ಜಲ್ಲಿಕಲ್ಲು ಹೆಚ್ಚಿನ ಜೀವಹಾನಿಗೆ ಕಾರಣ ಎನ್ನಲಾಗಿದೆ. ಜಲ್ಲಿಕಲ್ಲುಗಳು ಏಕಾಏಕಿ ಬಸ್ನಲ್ಲಿದ್ದ ಪ್ರಯಾಣಿಕರ ಮೇಲೆ ಬಿದ್ದ ಕಾರಣ, ಹೆಚ್ಚಿನ ಪ್ರಯಾಣಿಕರು ಸಾವನ್ನಪ್ಪಿದರು. ಹತ್ತುಕ್ಕೂ ಹೆಚ್ಚು ಜನರು ಜಲ್ಲಿಕಲ್ಲುಗಳ ಅಡಿಯಲ್ಲಿ ಸಮಾಧಿಯಾದರು.

ಘಟನೆಯಲ್ಲಿ ಮೃತಪಟ್ಟವರಲ್ಲಿ 18 ಮಂದಿ ಬಸ್ ಪ್ರಯಾಣಿಕರು, ಬಸ್ ಮತ್ತು ಟಿಪ್ಪರ್ ಚಾಲಕರು ಸೇರಿದ್ದಾರೆ. ಒಂದು ವರ್ಷದ ಮಗು ಸೇರಿದಂತೆ 11 ಮಹಿಳೆಯರು ಮತ್ತು 9 ಪುರುಷರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ 24 ಜನರು ಗಾಯಗೊಂಡಿದ್ದು, 5 ಮಂದಿಯ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಅಪಘಾತದ ನಂತರ ಚೆವೆಲ್ಲಾ-ವಿಕಾರಾಬಾದ್ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಗಾಯಾಳುಗಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಮಿರ್ಜಗುಡ ರಸ್ತೆ ಅಪಘಾತದಿಂದ ಆಘಾತಕ್ಕೊಳಗಾಗಿರುವುದಾಗಿ ಸಿಎಂ ರೇವಂತ್ ರೆಡ್ಡಿ ತಿಳಿಸಿದ್ದು, ತಕ್ಷಣವೇ ಅಪಘಾತದ ಸ್ಥಳಕ್ಕೆ ಹೋಗಲು ಅಧಿಕಾರಿಗಳಿಗೆ ಸಿಎಂ ಆದೇಶಿಸಿದ್ದಾರೆ. ಅಗತ್ಯ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಬಸ್ ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ತಕ್ಷಣ ಹೈದರಾಬಾದ್ಗೆ ಸ್ಥಳಾಂತರಿಸಲು ಮತ್ತು ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಸಿಎಸ್ ಮತ್ತು ಡಿಜಿಪಿಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಮತ್ತು ಅದಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಿಎಂ ಆದೇಶಿಸಿದ್ದಾರೆ.