ಪುಸ್ತಕ ಸುಟ್ಟರೆ ನನ್ನ ಜ್ಞಾನ ಸುಡಲಾಗದು: ಓದಿನ ಹಕ್ಕಿಗಾಗಿ ಪೊಲೀಸರ ಮೊರೆ ಹೋದ ವಿದ್ಯಾರ್ಥಿನಿ!

ದಾವಣಗೆರೆ: ಶಾಲೆಗೆ (School) ಹೋಗಬೇಡ ಎಂದು ಮಗಳ ಪುಸ್ತಕವನ್ನು (Books) ಸುಟ್ಟು ಹಾಕಿದ ಪರಿಣಾಮ ತಂದೆಯ (Father) ವಿರುದ್ಧ ಪುತ್ರಿ (Daughter) ದೂರು ನೀಡಿದ ಘಟನೆ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯ ಅರುಂಡಿ ಗ್ರಾಮದಲ್ಲಿ ನಡೆದಿದೆ.


ಮಗಳು 10ನೇ ತರಗತಿ ಓದುತ್ತಿದ್ದು, ಶಾಲೆಗೆ ಹೋಗಬೇಡ ಎಂದು ಪುಸ್ತಕ ಸುಟ್ಟುಹಾಕಿ ತಂದೆ ಗಲಾಟೆ ಮಾಡಿದ್ದ. ಈ ಹಿನ್ನೆಲೆ ಮಗಳು 112ಕ್ಕೆ ಕರೆ ಮಾಡಿ ತನ್ನ ತಂದೆ ಕುಡಿದು ಬಂದು ಗಲಾಟೆ ಮಾಡುವುದಲ್ಲದೆ ಶಾಲೆಗೆ ಕಳುಹಿಸುತ್ತಿಲ್ಲ ಎಂದು ದೂರು ನೀಡಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮದ್ಯವ್ಯಸನಿ ತಂದೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 112 ಅಧಿಕಾರಿಗಳಾದ ಹೇಮರಾಜ್ ಮತ್ತು ರವಿಕುಮಾರ್ ತಂದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಲ್ಲದೇ ತಕ್ಷಣ ವಿದ್ಯಾರ್ಥಿನಿಗೆ ಅಗತ್ಯ ಪುಸ್ತಕ, ನೋಟ್ ಬುಕ್‌ಗಳನ್ನು ಕೊಡಿಸಿ ಧೈರ್ಯ ತುಂಬಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯ ಪಿಐ ರವಿ ವಿದ್ಯಾರ್ಥಿನಿಗೆ ಹೆಚ್ಚಿನ ರೀತಿಯಲ್ಲಿ ಅಗತ್ಯ ಪುಸ್ತಕಗಳನ್ನು ಕೊಡಿಸಿದ್ದು, ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿ, ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ನ್ಯಾಮತಿ ಪೊಲೀಸ್ ಮತ್ತು 112 ಪೊಲೀಸ್ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.