ಪಾಕ್ ಬಂಧನದಲ್ಲಿರುವ ಬಿಎಸ್‌ಎಫ್ ಯೋಧ:ಪತ್ನಿ ಮನೆಯವರು ಹೇಳುತ್ತಿರುದೇನು?

ಕೊಲ್ಕತ್ತಾ :ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನ ಪ್ರವೇಶ ಮಾಡಿದ ಕಾರಣ ವೈರಿ ರಾಷ್ಟ್ರ ಪಾಕ್ ಸೇನೆಯಿಂದ ಬಂಧನಕ್ಕೊಳಗಾಗಿರುವ ಬಿಎಸ್‌ಎಫ್ ಯೋಧ ಪೂರ್ಣಂ ಸಾಹು ಅವರ ಬಿಡುಗಡೆಗೆ ಭಾರತ ಸರ್ಕಾರ ಪ್ರಯತ್ನ ಮುಂದುವರಿಸಿದ್ದು ಈ ಮಧ್ಯೆ ಯೋಧನ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಈಗಾಗಲೇ ತಮ್ಮ ಮಗನನ್ನು ಸುರಕ್ಷಿತವಾಗಿ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದು, ಸದ್ಯ ಕಣ್ಣೀರಲ್ಲಿ ಮುಳುಗಿದ್ದಾರೆ. ಪಂಜಾಬ್‌ನ ಫಿರೋಜ್‌ಪುರ ವಲಯದಲ್ಲಿ ಪೂರ್ಣಂ ಸಾಹು ಸೇನಾ ಸಮವಸ್ತ್ರದಲ್ಲಿ ಸರ್ವಿಸ್ ರೈಫಲ್ ಜೊತೆಗೆ ಅಜಾಗರೂಕತೆಯಿಂದ ಗಡಿ ದಾಟಿ ಪಾಕಿಸ್ಥಾನ ಪಡೆಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ನನ್ನ ಪತಿ ಮಂಗಳವಾರ (ಏ.22) ರಾತ್ರಿ ನನಗೆ ಕರೆ ಮಾಡಿದರು, ಅದೇ ಕೊನೆಬಾರಿ ಅವರ ಧ್ವನಿ ಕೇಳಿದ್ದು ಎಂದು ದುಃಖದಲ್ಲಿ ಮಾತನಾಡಿದ್ದಾರೆ. ಇನ್ನು ಯೋಧನ ತಂದೆ ಮಾತನಾಡಿ ನನ್ನ ಮಗ ದೇಶ ಸೇವೆ ಮಾಡುತ್ತಿದ್ದ. ಈಗ ಪಾಕಿಸ್ತಾನದ ವಶದಲ್ಲಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಯೋಧನ ಬಿಡುಗಡೆಯ ಬಗ್ಗೆ ಮಾತುಕತೆ ನಡೆಸಲು ಭಾರತ ಮತ್ತು ಪಾಕಿಸ್ತಾನ ಪಡೆಗಳು ಒಂದು ಸುತ್ತು ಧ್ವಜ ಸಭೆ ನಡೆಸಿರುವ ಬಗ್ಗೆ ಅಧಿಕಾರಿಗಳು ಈಗಾಗಲೇ ದೃಢಪಡಿಸಿದ್ದಾರೆ. ಆದರೆ ಇದನ್ನು ಹೊರತುಪಡಿಸಿ ಯೋಧನ ಪೂರ್ಣಂ ಸಾಹು ಕುಟುಂಬಕ್ಕೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ.ಹೀಗಾಗಿ ಕುಟುಂಬ ಆತಂಕದಲ್ಲಿದೆ.
