ಕಾಫಿನಾಡಿನಲ್ಲಿ ಕ್ರೂರತೆಯ ಕಹಿ ತಾಪ: ಶಿಶುಸಂಸ್ಥೆಯಲ್ಲಿ ಮಗುವಿನ ಮೇಲೆ ಬಿಸಿ ನೀರು ಸುರಿದ ಸಿಬ್ಬಂದಿ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಶಿಶು ಆರೈಕಾ ಸಿಬ್ಬಂದಿ ಎಡವಟ್ಟಿನಿಂದಾಗಿ ಹೆಣ್ಣು ಮಗುವೊಂದು ನರಳುವಂತಾಗಿದೆ. ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿ ಕುದಿಯುವ ಬಿಸಿ ನೀರು ಸುರಿದ ಪರಿಣಾಮ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ದುರ್ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ನಗರದ ಗಾಂಧಿನಾಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಬರಲಿದೆ. ಅನಾಥ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮಗು ನರಳಾಡುವಂತಾಗಿದೆ.
ಹೆಣ್ಣು ಮಗುವನ್ನ ದತ್ತು ಪಡೆಯಲು ಪೋಷಕರು ಸಿದ್ದತೆ ನಡೆಸಿದ್ದರು. ಅಷ್ಟರಲ್ಲಿ ಸಿಬ್ಬಂದಿಯಿಂದ ಎಡವಟ್ಟಾಗಿದೆ. ಜುಲೈ 09 ರಂದು ಘಟನೆ ನಡೆದಿದ್ದು, ಇಡೀ ಪ್ರಕರಣ ಮೇಲಧಿಕಾರಿಗಳಿಗೆ ತಿಳಿಯದಂತೆ ಸಿಬ್ಬಂದಿ ಮುಚ್ಚಿಟ್ಟಿದ್ದಾರೆ.
ಸದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದತ್ತು ಸಂಸ್ಥೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
