ಡಿ.ಜೆ.ಹಳ್ಳಿಯಲ್ಲಿ ಅಪ್ರಾಪ್ತೆಯ ಭೀಕರ ಕೊ*ಲೆ; ನಿಶ್ಚಿತಾರ್ಥವಾಗಿದ್ದ ಭಾವಿ ಪತಿಯಿಂದಲೇ ಕೃತ್ಯ

ಬೆಂಗಳೂರು: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನೇ ವ್ಯಕ್ತಿಯೋರ್ವ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ನಡೆದಿದೆ. ಯುವತಿ ಜೋಯಾಯಳ ಕತ್ತುಕೊಯ್ದು ಕೊಂದು ಶಬೀಲ್(20) ಪರಾರಿಯಾಗಿದ್ದು, ಬೆಳಗ್ಗೆ 6.30ರ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ಶಬೀಲ್ ಕುಟುಂಬ ಸದಸ್ಯರಿಂದಲೇ ಪ್ರಕರಣ ಬೆಳಕಿಗೆ ಬಂದಿದ್ದು, ಡಿ.ಜೆ.ಹಳ್ಳಿ ಠಾಣೆ ಪೊಲೀಸರಿಂದ ಆರೋಪಿ ಶಬೀಲ್ಗಾಗಿ ಶೋಧ ಮುಂದುವರಿದಿದೆ. ಬಾಲಕಿ ಹತ್ಯೆಯಾಗಿರುವ ಬಗ್ಗೆ ಬೆಳಗ್ಗೆ 11 ಗಂಟೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ, ಹತ್ಯೆಯಾದ ಸ್ಥಳದಲ್ಲಿ ಸೋಕೋ ಟೀಮ್ ಪರಿಶೀಲನೆ ನಡೆಸಿದೆ. ಕೊಲೆಮಾಡಿರುವುದು ಯಾರು ಎಂದು ಈಗಾಗಲೇ ಗೊತ್ತಾಗಿದ್ದು, ಆರೋಪಿ ಶಬೀಲ್ ಬಂಧಿಸಿದ ನಂತರ ಕೊಲೆಗೆ ಕಾರಣ ತಿಳಿಯಲಿದೆ. ಘಟನೆ ನಡೆದ ಸ್ಥಳ ಶಬೀಲ್ ಕುಟುಂಬಕ್ಕೆ ಸೇರಿದ್ದಾಗಿದ್ದು, ಈ ಮನೆಯಲ್ಲಿ ಯಾರೂ ವಾಸ ಇರಲಿಲ್ಲ. ಆಗಾಗ ಇಬ್ಬರು ಇಲ್ಲಿ ಬಂದು ಸೇರುತ್ತಿದ್ದರೂ ಎಂಬ ಮಾಹಿತಿಯಿರೋದಾಗಿ ಅವರು ತಿಳಿಸಿದ್ದಾರೆ.