ಹೈದರಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ 50 ವರ್ಷದ ಮಹಿಳೆಯ ಭೀಕರ ಕೊಲೆ

ನವದೆಹಲಿ : ಹೈದರಾಬಾದ್‌ನ ಅಪಾರ್ಟ್‌ಮೆಂಟ್‌ನಲ್ಲಿ (Hyderabad apartment) 50 ವರ್ಷದ ಮಹಿಳೆಯನ್ನು ಆಕೆಯ ಮನೆಯ ಒಳಗಡೆಯ ಬರ್ಬರವಾಗಿ ಹತ್ಯೆ (Murder) ಮಾಡಲಾಗಿದೆ. ಈ ಕೊಲೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ ಆಗಿವೆ. ಪೊಲೀಸರ ಪ್ರಕಾರ, ಆಕೆಯ ಮೇಲೆ ಅಮಾನುಷವಾಗಿ ದಾಳಿ ಮಾಡಿದ ವ್ಯಕ್ತಿಗಳು ಮಹಿಳೆಯ ಕೈಕಾಲುಗಳನ್ನು ಕಟ್ಟಿದ್ದಾರೆ. ಪ್ರಶರ್ ಕುಕ್ಕರ್‌ನಿಂದ ಆಕೆಯ ತಲೆಗೆ ಹೊಡೆದಿದ್ದಾರೆ. ಚಾಕು ಮತ್ತು ಕತ್ತರಿ ಬಳಸಿ ಆಕೆಯ ಗಂಟಲನ್ನು ಸೀಳಿದ್ದಾರೆ. ಈ ಘೋರ ಕೃತ್ಯ ಎಸಗಿದ ಬಳಿಕ ಇಬ್ಬರು ವ್ಯಕ್ತಿಗಳು ಇಡೀ ಮನೆಯನ್ನು ಲೂಟಿ ಮಾಡಿದ್ದಾರೆ. ಬಳಿಕ ಅದೇ ಮನೆಯಲ್ಲಿ ಸ್ನಾನ ಮಾಡಿ, ಬಟ್ಟೆ ಬದಲಾಯಿಸಿಕೊಂಡು ತಮ್ಮ ರಕ್ತಸಿಕ್ತ ಬಟ್ಟೆಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಸೈಬರಾಬಾದ್‌ನಲ್ಲಿ ಘಟನೆ
ಮೃತ ಮಹಿಳೆಯನ್ನು ರೇಣು ಅಗರ್ವಾಲ್ ಎಂದು ಗುರುತಿಸಲಾಗಿದೆ. ತಮ್ಮ ಪತಿ ಹಾಗೂ 26 ವರ್ಷದ ಮಗನೊಂದಿಗೆ ಹೈದರಾಬಾದ್‌ನ ಐಟಿ ಕೇಂದ್ರವಾದ ಸೈಬರಾಬಾದ್‌ನಲ್ಲಿರುವ ಸ್ವಾಲ್ ಲೇಕ್ ಅಪಾರ್ಟ್‌ಮೆಂಟ್ಸ್‌ನ 13ನೇ ಮಹದಿಯಲ್ಲಿ ವಾಸ ಮಾಡುತ್ತಿದ್ದರು. ಅಗರ್ವಾಲ್ ಹಾಗೂ ಅವರ ಮಗ ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ತಮ್ಮ ಸ್ಟೀಲ್ ಬ್ಯುಸಿನೆಸ್ ನೋಡಿಕೊಳ್ಳಲು ತೆರಳಿದ್ದರು. ಸಂಜೆಯ ವೇಳೆಗೆ ರೇಣು ಅವರು ತಮ್ಮ ಫೋನ್ ಕರೆಗಳಿಗೆ ಉತ್ತರಿಸದೇ ಇದ್ದಾಗ ಅವರ ಪತಿ ಚಿಂತಿತರಾಗಿದ್ದರು. ತಕ್ಷಣವೇ ಏನಾಗಿದೆ ಎಂದು ನೋಡಲು ಅವರು ಮನೆಗೆ ಮರಳಿದ್ದರು.
ಮನೆಯ ಮುಖ್ಯ ದ್ವಾರ ಲಾಕ್ ಆಗಿರುವುದನ್ನು ಅವರು ಗಮನಿಸಿದ್ದಾರೆ. ಇದಕ್ಕಾಗಿ ಬಾಲ್ಕನಿಯಿಂದ ಮನೆಯ ಒಳ ಹೋಗಲು ಅವರು ಪ್ಲಂಬರ್‌ರ ಸಹಾಯವನ್ನು ಕೋರಿ ಕರೆ ಮಾಡಿದ್ದರು. ಬಳಿಕ ಮನೆಯ ಕೋಣೆಗೆ ಪ್ರವೇಶ ಮಾಡಿದಾಗ ರೇಣು ಅವರ ನಿರ್ಜೀವ ದೇಹ ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ತನಿಖೆಯನ್ನು ಪ್ರಾರಂಭ ಮಾಡಲಾಯಿತು.
40 ಗ್ರಾಮ್ ಚಿನ್ನ, 1 ಲಕ್ಷ ನಗದು ಕಳವು
ಪೊಲೀಸರ ಪ್ರಕಾರ, ದರೋಡೆಕೋರರು ಸುಮಾರು 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ಕದ್ದಿದ್ದಾರೆ. ಮನೆಯಲ್ಲಿ ಸ್ನಾನ ಮಾಡಿ ರಕ್ತಸಿಕ್ತ ಬಟ್ಟೆಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ತನಿಖಾಧಿಕಾರಿಗಳು ಇಬ್ಬರು ಪ್ರಮುಖ ಶಂಕಿತರನ್ನು ಗುರುತಿಸಿದ್ದಾರೆ, ಇಬ್ಬರೂ ಮನೆಕೆಲಸಗಾರರು. ಒಬ್ಬ ಹರ್ಷ, ಇತ್ತೀಚೆಗೆ ಕೋಲ್ಕತ್ತಾ ಮೂಲದ ಮ್ಯಾನ್‌ಪವರ್ ಸಂಸ್ಥೆಯ ಮೂಲಕ ಅಗರ್ವಾಲ್ ಕುಟುಂಬದಿಂದ ನೇಮಕಗೊಂಡಿದ್ದರು. ಇನ್ನೊಬ್ಬ, ರೌಶನ್, 14 ನೇ ಮಹಡಿಯಲ್ಲಿರುವ ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಸಿಸಿಟಿವಿ ದೃಶ್ಯಾವಳಿಗಳು ಇಬ್ಬರು 13 ನೇ ಮಹಡಿಗೆ ಪ್ರವೇಶಿಸಿ ಸಂಜೆ 5.02 ರ ಸುಮಾರಿಗೆ ಹೊರಟುಹೋಗುವುದನ್ನು ತೋರಿಸಿದೆ.
ಆರೋಪಿಗಳು ಈಗ ಪರಾರಿಯಾಗಿದ್ದು, ರಾಂಚಿಗೆ ತೆರಳುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರೌಶನ್ ಅವರ ಉದ್ಯೋಗದಾತನಿಗೆ ಸೇರಿದ ದ್ವಿಚಕ್ರ ವಾಹನದಲ್ಲಿ ಅವರು ಪರಾರಿಯಾಗುತ್ತಿರುವುದು ಕಂಡುಬಂದಿದೆ.
