ಆಂಧ್ರಪ್ರದೇಶದಲ್ಲಿ ಭೀಕರ ಕೊಲೆ: ಅನೈತಿಕ ಸಂಬಂಧ, ಆಸ್ತಿ ವಿವಾದಕ್ಕೆ ಅಳಿಯನ ಶಿರಚ್ಛೇದ ಮಾಡಿದ ಮಾವ!

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಮಾವನೊಬ್ಬ ತನ್ನ ಅಳಿಯನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಮತ್ತು ಆಸ್ತಿ ವಿವಾದವೇ ಈ ಅಮಾನುಷ ಕೃತ್ಯಕ್ಕೆ ಕಾರಣ ಎಂದು ಹೇಳಲಾಗಿದ್ದು, ಅಳಿಯನ ಶಿರಚ್ಛೇದ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಲಾಗಿದೆ.

ಈ ಕೊಲೆ ನಡೆಸಲು ಆರೋಪಿ ತನ್ನ ಸ್ನೇಹಿತನಿಗೆ 4 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಎನ್ನಲಾಗಿದೆ.
ಧರ್ಮಾವರಂನ ವಿಶ್ವನಾಥ್, 20 ವರ್ಷಗಳ ಹಿಂದೆ ವೆಂಕಟರಮಣಪ್ಪನವರ ಹಿರಿಯ ಮಗಳು ಶ್ಯಾಮಲಾಳನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ವಿಶ್ವನಾಥ್ ತಮ್ಮ ಪತ್ನಿಯ ತಂಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಇದು ಕುಟುಂಬದಲ್ಲಿ ದೊಡ್ಡ ಕಲಹಕ್ಕೆ ಕಾರಣವಾಗಿತ್ತು. ವಿಶ್ವನಾಥ್ ಮತ್ತು ಅವರ ಪತ್ನಿಯ ನಡುವೆ ಮಾತ್ರವಲ್ಲದೆ, ವೆಂಕಟರಮಣಪ್ಪ ಮತ್ತು ಅವರ ಪತ್ನಿಯ ನಡುವೆಯೂ ವ್ಯಾಜ್ಯಗಳು ಸೃಷ್ಟಿಯಾದವು.
ಕೌಟುಂಬಿಕ ಕಲಹದಿಂದಾಗಿ, ವಿಶ್ವನಾಥ್ ತಮ್ಮ ನಾದಿನಿ ಮತ್ತು ಅತ್ತೆಯೊಂದಿಗೆ ಧರ್ಮಾವರಂ ತೊರೆದು 78 ಕಿ.ಮೀ ದೂರದ ಕದಿರಿಗೆ ಹೋಗಿ ನೆಲೆಸಿದ್ದರು. ಇತ್ತೀಚೆಗೆ, ವಿಶ್ವನಾಥ್ ತಮ್ಮ ಅತ್ತೆಯ ಹೆಸರಿನಲ್ಲಿದ್ದ ಭೂಮಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದು, ಇದು ವೆಂಕಟರಮಣಪ್ಪನವರನ್ನು ಮತ್ತಷ್ಟು ಕೆರಳಿಸಿತ್ತು.
ತೀವ್ರ ಕೋಪದಿಂದ ಕುದಿಯುತ್ತಿದ್ದ ವೆಂಕಟರಮಣಪ್ಪ ತಮ್ಮ ಅಳಿಯನನ್ನು ಕೊಲ್ಲಲು ಸಂಚು ರೂಪಿಸಿದ್ದರು. ತಮ್ಮ ಸ್ನೇಹಿತ ಕಟ್ಟಮಯ್ಯನ ಸಹಾಯ ಪಡೆದ ಅವರು, ಕೊಲೆ ನಡೆಸಲು 4 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು ಎನ್ನಲಾಗಿದೆ.
ಅದರಂತೆ ಜುಲೈ 3 ರಂದು, ಕಟ್ಟಮಯ್ಯ ಕೃಷಿ ಉದ್ದೇಶಗಳಿಗಾಗಿ 50,000ರೂ. ಆರ್ಥಿಕ ನೆರವಿನ ನೆಪದಲ್ಲಿ ವಿಶ್ವನಾಥ್‌ನನ್ನು ಕದಿರಿಯಿಂದ ಮುಡಿಗುಬ್ಬಕ್ಕೆ ಕರೆಸಿಕೊಂಡರು. ವಿಶ್ವನಾಥ್ ಮುಡಿಗುಬ್ಬ ತಲುಪಿದಾಗ, ವೆಂಕಟರಮಣಪ್ಪ, ಕಟ್ಟಮಯ್ಯ ಮತ್ತು ಇತರ ಮೂವರು ಸಹಚರರು ಸೇರಿ ವಿಶ್ವನಾಥನ ಮೇಲೆ ದಾಳಿ ಮಾಡಿದರು. ವಿಶ್ವನಾಥ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಗೈದು, ದೇಹವನ್ನು ಛಿದ್ರಗೊಳಿಸಿ, ಶಿರಚ್ಛೇದ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತನಿಖೆ ವೇಳೆ, ವಿಶ್ವನಾಥ್ ಅವರ ಮೊಬೈಲ್ ಫೋನ್ ಟವರ್ ಲೊಕೇಷನ್ ಬಳಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ವೆಂಕಟರಮಣಪ್ಪ, ಕಟ್ಟಮಯ್ಯ ಮತ್ತು ಇತರ ಮೂವರ ಫೋನ್‌ಗಳು ಕೊಲೆ ನಡೆದ ಸ್ಥಳದಲ್ಲೇ ಇದ್ದುದನ್ನು ಖಚಿತಪಡಿಸಿಕೊಂಡ ನಂತರ ಅವರನ್ನು ಬಂಧಿಸಲಾಯಿತು ಎಂದೂ ಪೊಲೀಸರು ತಿಳಿಸಿದ್ದಾರೆ.
