ಕಲಬುರಗಿಯಲ್ಲಿ ಹಾಡಹಗಲೇ ಭಾರಿ ಚಿನ್ನಾಭರಣ ದರೋಡೆ: ಮಾಲೀಕನ ಕೈಕಟ್ಟಿ, ಗನ್ ತೋರಿಸಿ 2.5 ಕೆ.ಜಿ ಚಿನ್ನ ಕಳವು!

ಕಲಬುರಗಿ: ಇತ್ತೀಚೆಗಷ್ಟೆ, ಬೀದರ್ ನಗರದಲ್ಲಿ ಬ್ಯಾಂಕ್ ಸಿಬ್ಬಂದಿಯನ್ನು ಹತ್ಯೆ ಮಾಡಿ, ಹಣ ದರೋಡೆ ಮಾಡಿರುವ ಪ್ರಕರಣ ಬೆಚ್ಚಿಬಿಳಿಸಿತ್ತು. ಆ ಪ್ರಕರಣ ಮಾಸುವ ಮುನ್ನವೆ ಕಲಬುರಗಿಯಲ್ಲೊಂದು ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ.

ಹಾಡಹಗಲೇ ಮಟಮಟ ಮಧ್ಯಾಹ್ನವೇ ನಗರದ ಮಧ್ಯಭಾಗ ಹಾಗೂ ಜನನಿಬಿಡವಾದ ಪ್ರದೇಶವಾದ ಸರಾಫ್ ಬಜಾರ ನಲ್ಲಿರುವ ಮಾಲೀಕ್ ಎಂಬ ಚಿನ್ನದ ಅಂಗಡಿಗೆ ನುಗ್ಗಿದ ನಾಲ್ವರು ಮುಸುಕು ಧಾರಿ ದರೋಡೆಕೋರರು ಚಿನ್ನದ ಅಂಗಡಿಯ ಮಾಲೀಕನ ಕೈಕಾಲುಗಳನ್ನು ಕಟ್ಟಿ ಹಾಕಿ, ಗನ್ ತೋರಿಸಿ, ಅಂಗಡಿಯಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ 2.5 ಕೆ.ಜಿ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 12 ರ ಸುಮಾರಿಗೆ ನಾಲ್ಕು ಜನ ಮುಸುಕಧಾರಿಗಳು ಮೊದಲನೆ ಮಹಡಿಯಲ್ಲಿರುವ ಮಾಲೀಕ್ ಚಿನ್ನದ ಅಂಗಡಿಗೆ ಹೋಗಿದ್ದಾರೆ. ಆಗ ಅಂಗಡಿಯಲ್ಲಿ ಮಾಲೀಕ ಮಾತ್ರ ಇದ್ದ ಎನ್ನಲಾಗಿದೆ. ನೇರವಾಗಿ ಚಿನ್ನದ ಅಂಗಡಿಗೆ ನುಗ್ಗಿದ ದರೋಡೆಕೋರರು, ಮೊದಲು ಮಾಲೀಕನ ಕೈಕಾಲು ಕಟ್ಟಿದ್ದಾರೆ. ನಂತರ ಆತನ ತಲೆಗೆ ಗನ್ ಇಟ್ಟು ಲಾಕರ್ ನಲ್ಲಿರುವ ಚಿನ್ನಾಭರಣವನ್ನೆಲ್ಲವನ್ನು ತೆಗೆದಕೊಂಡು ಪರಾರಿಯಾಗಿದ್ದಾರೆ. ಇಬ್ಬರು ಮುಸುಕುಧಾರಿಗಳು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಕಮೀಷನರ್ ಡಾ. ಶರಣಪ್ಪ, ಡಿಸಿಪಿ ಕನೀಕಾ ಸಿಕ್ರೆವಾಲ್, ಎಸಿಪಿ, ಪಿಐ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನನೀಬಿಡ ಪ್ರದೇಶವಾಗಿರುವ ಸರಾಫ್ ಬಜಾರ್ ನಲ್ಲಿ ಈ ರೀತಿ ಹಾಡಹಗಲೇ ಸಿನಿಮಿಯ ರೀತಿಯಲ್ಲಿ ಭಯಾನಕ ದರೋಡೆ ನಡೆದಿದ್ದು, ಸಾರ್ವಜನಿಕರು ಹಾಗೂ ಚಿನ್ನದಂಗಡಿ ಮಾಲೀಕರನ್ನು ಬೆಚ್ಚಿಬಿಳಿಸುವಂತೆ ಮಾಡಿದೆ.
ನಾಲ್ಕು ಜನರ ತಂಡ ಬಂದು ದರೋಡೆ ಮಾಡಿದ್ದಾರೆ. ಮಾಲೀಕನ ತಲೆಗೆ ಗನ್ ಹಿಡಿದು 2.5 ಕೆಜಿ ಚಿನ್ಙಾಭರಣ ದರೋಡೆ ಮಾಡಿದ್ದಾರೆ. ಅಂಗಡಿಯಲ್ಲಿ ಒಬ್ಬನೇ ಇದ್ದಾಗ ದರೋಡೆ ನಡೆದಿದೆ ಎಂದು ಮಾಲೀಕ ಹೇಳಿದ್ದಾರೆ. ದರೋಡೆಕೋರರ ಪತ್ತೆಗೆ ಐದು ತಂಡ ರಚನೆ ಮಾಡಿದ್ದು. ಆದಷ್ಟು ಬೇಗ ದರೋಡೆಕೋರರ ಬಂಧನ ಮಾಡುತ್ತೇವೆ.
-ಡಾ. ಶರಣಪ್ಪ, ನಗರ ಪೊಲೀಸ್ ಕಮಿಷನರ್, ಕಲಬುರಗಿ
