ರೈಲು ಸಂಚಾರದ ವೇಳೆ ಸೇತುವೆ ಕುಸಿತ – ಭೀಕರ ಅವಘಡ

ಮಾಸ್ಕೊ:ರೈಲು ಹಾದುಹೋಗುತ್ತಿದ್ದಂತೆಯೇ ಸೇತುವೆಯೊಂದು ಕುಸಿದು ಬಿದ್ದ ಘಟನೆ ಉಕ್ರೇನ್ನ ಗಡಿಯಲ್ಲಿರುವ ಕುರ್ಸ್ಕ್ನ ದಕ್ಷಿಣ ಭಾಗದಲ್ಲಿ ನಡೆದಿದೆ. ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎರಡನೇ ಅವಘಡ ಇದಾಗಿದೆ.
ಈ ಕುರಿತು ರಷ್ಯಾದ ಅಧಿಕಾರಿ ಅಲೆಕ್ಸಾಂಡರ್ ಖಿನ್ಸ್ಟೀನ್ ಅವರು ಟೆಲಿಗ್ರಾಮ್ನಲ್ಲಿ ಮಾಹಿತಿ ನೀಡಿದ್ದಾರೆ.
ನಿನ್ನೆ ರಾತ್ರಿ ಝೆಲೆಜ್ನೋಗೊರ್ಸ್ಕ್ ಜಿಲ್ಲೆಯಲ್ಲಿ ರೈಲು ಹಾದುಹೋಗುವಾಗ ಸೇತುವೆಯೊಂದು ಕುಸಿದಿದೆ. ರೈಲಿನ ಒಂದು ಭಾಗ ಸೇತುವೆಯ ಕೆಳಗಿನ ರಸ್ತೆಗೆ ಬಿದ್ದಿದೆ. ಪರಿಣಾಮ ರೈಲಿನ ಲೋಕೋಮೋಟಿವ್ ಚಾಲಕರಲ್ಲಿ ಒಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ರಷ್ಯಾದ ಇಂಟರ್ಫ್ಯಾಕ್ಸ್ ಏಜೆನ್ಸಿಯು ಸೇತುವೆ ಕುಸಿತವು ಸ್ಫೋಟದ ಪರಿಣಾಮವಾಗಿದೆ ಎಂದು ಹೇಳಿದೆ. ಸೇತುವೆಗಳನ್ನು ಸ್ಫೋಟಿಸುವುದು ಮತ್ತು ರೈಲುಗಳು ಹಳಿತಪ್ಪಿರುವುದು ಉಕ್ರೇನ್ ಭಯೋತ್ಪಾದಕರ ಕೃತ್ಯವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ರಷ್ಯಾದ ಹಿರಿಯ ಸೆನೆಟರ್ ಒಬ್ಬರು ಹೇಳಿದ್ದಾರೆ.
ಸಂತ್ರಸ್ತರನ್ನು ಹುಡುಕುವ ಮತ್ತು ರಕ್ಷಿಸುವ ಪ್ರಯತ್ನಗಳು ರಾತ್ರಿಯಿಡೀ ಮುಂದುವರಿದವು ಮತ್ತು ಸುಮಾರು 180 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.