ಬಡವರ ಪಾಲಿನ ‘ದೇವಾಲಯ’ದಲ್ಲೇ ಲಂಚ: ತುಮಕೂರು ಪಿಎಚ್‌ಸಿ ಸಿಬ್ಬಂದಿಯಿಂದ ಚಿಕಿತ್ಸೆಗೆ ಹಣಕ್ಕಾಗಿ ಬೇಡಿಕೆ; ವಿಡಿಯೋ ವೈರಲ್

ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಲಾಗದೇ ಇರುವಂತಹ ಜನರ ಒಳಿತಿಗೋಸ್ಕರ ರಾಜ್ಯ ಸರ್ಕಾರ ನಡೆಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಡವಾರ ಪಾಲಿಗೆ ದೇವಾಲಯವೇ ಸರಿ.

ಆದರೆ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಜೇಬು ತುಂಬಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕುತ್ತಿವೆ.
ಈ ಕುರಿತು ಹಲವೆಡೆ ದೂರುಗಳು ಕೇಳಿಬಂದಿದ್ದು, ಇದೀಗ ತುಮಕೂರಿನ ಕುಣಿಗಾಲ್ ತಾಲೂಕಿನ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಲಂಚಕ್ಕಾಗಿ ಬೇಡಿಕೆ ಇಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳಾ ಸಿಬ್ಬಂದಿಯೊಬ್ಬರು ವಿವಿಧ ಚಿಕಿತ್ಸೆಗಳಿಗೆ 20, 30, 50 ರೂಪಾಯಿಗಳನ್ನು ಕೊಡಿ ಎಂದು ಕೇಳುತ್ತಿರುವ ದೃಶ್ಯವನ್ನು ಮಹಿಳೆಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಹೀಗೆ ವಿಡಿಯೊ ಮಾಡಿಕೊಳ್ಳುತ್ತಿದ್ದರೂ ತಲೆಕೆಡಿಸಿಕೊಳ್ಳದ ಸಿಬ್ಬಂದಿ ರೆಕಾರ್ಡ್ ಮಾಡ್ಕೋ ಎಂದು ಹೇಳಿದ್ದಾರೆ.
ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಎಕ್ಸ್ ಖಾತೆಯನ್ನು ಉಲ್ಲೇಖಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.