ವೈಫೈ ನಿಂದ ಬ್ರೇಕ್‌ಅಪ್: ಹುಡುಗಿ ನಿರಪರಾಧಿ, ಆದರೆ ಹುಡುಗ ಕೇಳಲೇ ಇಲ್ಲ

ಟೆಕ್ನಾಲಜಿ ನಮ್ಮ ಕೆಲಸವನ್ನು ಸುಲಭಗೊಳಿಸ್ತಿದೆ ನಿಜ, ಆದ್ರೆ ಕೆಲವೊಮ್ಮೆ ಇದೇ ನಮ್ಮ ಸಂಬಂಧವನ್ನು ಹಾಳು ಮಾಡ್ತಿದೆ. ನೈಋತ್ಯ ಚೀನಾದ ಚಾಂಗ್ಕಿಂಗ್ ನಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮಿಯ ಫೋನ್, ಹೊಟೇಲ್ ವೈಫೈಗೆ ಆಟೋಮೆಟಿಕ್ ಆಗಿ ಕನೆಕ್ಟ್ ಆಗಿದೆ ಎನ್ನುವ ಕಾರಣಕ್ಕೆ ಹುಡುಗ ಬ್ರೇಕ್ ಅಪ್ ಮಾಡಿಕೊಂಡಿದ್ದಾನೆ. ಗರ್ಲ್ ಫ್ರೆಂಡ್ ಫೋನ್ ವೈಫೈಗೆ ಕನೆಕ್ಟ್ ಆಗ್ತಿದ್ದಂತೆ ಆತನಿಗೆ ಅನುಮಾನ ಬಂದಿದೆ. ಹುಡುಗಿ ಬೇರೆ ಹುಡುಗನ ಜೊನೆ ಇಲ್ಲಿಗೆ ಬಂದಿದ್ಲು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾನೆ. ಹುಡುಗಿ ನಾನು ನಿರಪರಾಧಿ ಅಂದ್ರೂ ಅದನ್ನು ಹುಡುಗ ಕೇಳಲು ಸಿದ್ಧನಿರಲಿಲ್ಲ. ಎರಡನೇ ಬಾರಿ ಈ ಬಗ್ಗೆ ವಿಚಾರ ಮಾಡ್ದೆ, ಹೊಟೇಲ್ ನಲ್ಲಿ ಹುಡುಗಿ ಬಿಟ್ಟು ಹೋಗಿದ್ದಾನೆ. ಕೊನೆಯಲ್ಲಿ ವೈಫೈ ಕನೆಕ್ಷನ್ ಸತ್ಯ ಗೊತ್ತಾಗಿದೆ.
ಸಂಬಂಧ ಹಾಳು ಮಾಡಿದ ಹೊಟೇಲ್ ವೈಫೈ (WiFi) :
ಲೀ ಹೆಸರಿನ ಮಹಿಳೆ ತನ್ನ ಬಾಯ್ ಫ್ರೆಂಡ್ ಜೊತೆ ಮೊದಲ ಬಾರಿ ಹೊಟೇಲ್ ಗೆ ಬಂದಿದ್ದಳು. ಆಕೆ ತನ್ನ ಐಡಿ ಕಾರ್ಡ್ ತಂದಿರ್ಲಿಲ್ಲ. ಮೊಬೈಲ್ ನಲ್ಲಿದ್ದ ತನ್ನ ದಾಖಲೆ ತೋರಿಸುವ ಪ್ರಯತ್ನ ಮಾಡ್ತಿದ್ದಳು. ರಿಸೆಪ್ಶನ್ ಗೆ ಬರ್ತಿದ್ದಂತೆ ಆಕೆ ಫೋನ್, ಆಟೋಮೆಟಿಕ್ ಆಗಿ ಹೊಟೇಲ್ ವೈ ಫೈಗೆ ಕನೆಕ್ಟ್ ಆಗಿದೆ. ಇದನ್ನು ಹುಡುಗ ಗಮನಿಸಿದ್ದಾನೆ. ಗರ್ಲ್ ಫ್ರೆಂಡ್ ಮೇಲೆ ಅನುಮಾನ ಬಂದಿದೆ. ಆಟೋಮೆಟಿಕ್ ಆಗಿ ಫೋನ್ ಕನೆಕ್ಟ್ ಆಗ್ತಿದೆ ಅಂದ್ರೆ ಆಕೆ ಮೊದಲು ಈ ಹೊಟೇಲ್ ಗೆ ಬಂದಿರಬೇಕು. ನನ್ನ ಬಳಿ ಸುಳ್ಳು ಹೇಳಿದ್ದಾಳೆಂದು ಭಾವಿಸಿದ್ದಾನೆ. ನೇರವಾಗಿ ಆಕೆಗೆ ಪ್ರಶ್ನೆ ಕೇಳಿದ್ದಾನೆ. ಹುಡುಗಿ, ನಾನೆಂದೂ ಈ ಹೊಟೆಲ್ ಗೆ ಬಂದಿರಲಿಲ್ಲ ಅಂತ ಎಷ್ಟೇ ಹೇಳಿದ್ರೂ ಆತ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹುಡುಗಿ ಜೊತೆ ಬ್ರೇಕ್ ಅಪ್ ಮಾಡ್ಕೊಂಡಿದ್ದಾನೆ.
ತನಿಖೆ ವೇಳೆ ತಿಳಿದಿದ್ದು ಏನು? : ಹುಡುಗಿ ಈ ಹೊಟೇಲ್ ಗೆ ಎಂದೂ ಬಂದಿರಲಿಲ್ಲ, ಆದ್ರೂ ವೈಫೈ ಕನೆಕ್ಟ್ ಆಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಲೀ ಈ ಹಿಂದೆ ಹೊಟೇಲ್ ಒಂದರಲ್ಲಿ ಕೆಲ್ಸ ಮಾಡ್ತಿದ್ದಳು. ಆ ಹೊಟೇಲ್ ವೈಫೈ ಆಕೆ ಫೋನ್ ಗೆ ಕನೆಕ್ಟ್ ಆಗಿತ್ತು. ಅದರ ಹೆಸರು ಮತ್ತು ಪಾಸ್ವರ್ಡ್ ಈ ಅಪರಿಚಿತ ಹೋಟೆಲ್ನಂತೆಯೇ ಇತ್ತು. ಅದಕ್ಕಾಗಿಯೇ ಫೋನ್ ಆ ನೆಟ್ವರ್ಕ್ ಅನ್ನು ಗುರುತಿಸಿದೆ. ಸ್ವಯಂಚಾಲಿತವಾಗಿ ಕನೆಕ್ಟ್ ಆಗಿದೆ. ಇದು ಸಂಪೂರ್ಣವಾಗಿ ಟೆಕ್ನಿಕಲ್ ತೊಂದರೆ.
ಸೊಶಿಯಲ್ ಮೀಡಿಯಾದಲ್ಲಿ ಇದ್ರ ಬಗ್ಗೆ ತೀವ್ರ ಚರ್ಚೆಯಾಗ್ತಿದೆ. ಇದನ್ನು ಅನೇಕರ ಓವರ್ ರಿಯಾಕ್ಷನ್ ಎಂದಿದ್ದಾರೆ. ಸಂಬಂಧದ ಮೇಲಿನ ವಿಶ್ವಾಸ ಈಗಿನ ದಿನಗಳಲ್ಲಿ ತಂತ್ರಜ್ಞಾನದಿಂದ ಮತ್ತಷ್ಟು ಹಾಳಾಗ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ವೈಫೈ ಕನೆಕ್ಷನ್ ಕಟ್ ಆದಂತೆ ಸಂಬಂಧವನ್ನು ಕತ್ತರಿಸಿಕೊಳ್ಳೋದು ಎಷ್ಟು ಸರಿ ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಸ್ಮಾರ್ಟ್ ಫೋನ್ ನಲ್ಲಿ ಹಳೆ ವೈಫೈ ಹೆಸರು ಹಾಗೂ ಪಾಸ್ವರ್ಡ್ ಉಳಿದುಕೊಂಡಿದ್ದು, ಅದನ್ನೇ ಹೋಲುವ ಹೊಸ ವೈಫೈ ಹೆಸರು ಹಾಗೂ ಪಾಸ್ವರ್ಡ್ ಸಿಕ್ಕಾಗ ಫೋನ್ ಅಟೋಮೆಟಿಕ್ ಆಗಿ ಕನೆಕ್ಟ್ ಆಗುತ್ತದೆ. ಇದು ಸಾಮಾನ್ಯ ಎಂದು ತಜ್ಞರು ಹೇಳಿದ್ದಾರೆ. ಇಂಥ ಸಮಸ್ಯೆ ತಪ್ಪಿಸಬೇಕು ಅಂದ್ರೆ ಆಟೋಮೆಟಿಕ್ ವೈಫೈ ಕನೆಕ್ಷನ್ ಆಯ್ಕೆಯನ್ನು ಆಫ್ ಮಾಡೋದು ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.