“ಬ್ರೇಕಪ್ ಆಗಿದೆ, ಕೆಲಸದ ಕಡೆ ಗಮನ ಕೊಡಲು ಸಾಧ್ಯವಿಲ್ಲ”: ಜೆನ್ Z ಉದ್ಯೋಗಿಯ ಪ್ರಾಮಾಣಿಕ ಲೀವ್ ಲೆಟರ್ ವೈರಲ್, ಬಾಸ್ ತಕ್ಷಣ ಅನುಮೋದನೆ

90ರ ದಶಕದಲ್ಲಿ ಹುಟ್ಟಿದ ಮಕ್ಕಳು ಒಂದು ಥರ ಆದರೆ, 2000ರ ನಂತರ ಹುಟ್ಟಿದ ಮಕ್ಕಳು ಇನ್ನೊಂದು ಥರ ಎಂದು ಹೇಳಲಾಗುವುದು. ಜೆನ್ Z (Gen Z) ಪೀಳಿಗೆಯು ನೇರವಾಗಿ, ಮುಚ್ಚುಮರೆಯಿಲ್ಲದೆ ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ಪ್ರೊಫೆಶನಲ್ ಲೈಫ್‌ನಲ್ಲೂ ಕೂಡ ತಮ್ಮದೇ ಆದ ಛಾಪು ಮೂಡಿಸುತ್ತಿದೆ. ಕೆಲವೊಮ್ಮೆ ಅವರ ಮಾತುಗಾರಿಕೆ, ಕೆಲಸ, ಬದುಕಿನ ಉದ್ದೇಶವು ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲದೆ ಹಿಂಜರಿಕೆಯಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಾರೆ.

ಲೀವ್ ಲೆಟರ್ ಫುಲ್ ವೈರಲ್
ಎಷ್ಟೇ ಟೀಕೆ ಮಾಡಿದರೂ ಕೂಡ ಈ ಪೀಳಿಗೆಗೆ ಆದಷ್ಟು ಬೇಗ ಯಶಸ್ಸು ಸಿಗುವುದು. ಕೆಲಸದ ಸ್ಥಳದಲ್ಲಿ, ಕೂಡ ತಮ್ಮ ಅಭಿಪ್ರಾಯ ಹೇಳೋದು, ನಾಳೆ ಕೆಲಸ ಇರತ್ತೋ ಇಲ್ಲವೋ ಎಂದು ಅವರು ಆಲೋಚನೆಯನ್ನೇ ಮಾಡೋದಿಲ್ಲ. ಜೀವನದ ಬಗ್ಗೆ ಯಾವುದೇ ಯೋಚನೆ ಮಾಡದೆ, ಅಭಿಪ್ರಾಯಗಳನ್ನು ಹಿಂಜರಿಕೆಯಿಲ್ಲದೆ ವ್ಯಕ್ತಪಡಿಸುತ್ತಾರೆ, ನಿರ್ಧಾರಗಳನ್ನು ತಗೊಳ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಉದ್ಯೋಗಿಯು ಕಳಿಸಿದ ಲೀವ್ ಲೆಟರ್ ಫುಲ್ ವೈರಲ್ ಆಗ್ತಿದೆ.
ಪ್ರಾಮಾಣಿಕ ರಜೆಯ ಅರ್ಜಿ
ಆ ಉದ್ಯೋಗಿ ಕಳಿಸಿದ ಲೀವ್ ಲೆಟರ್‌ಗೆ ತಕ್ಷಣವೇ ಅನುಮೋದನೆ ಕೂಡ ಸಿಕ್ಕಿದೆ. ಹಾಗಾದರೆ ಆ ಲೀವ್ ಲೆಟರ್‌ನಲ್ಲಿ ಏನಿತ್ತು? KnotDating ಕಂಪೆನಿಯ ಸಹ-ಸಂಸ್ಥಾಪಕ, ಸಿಇಒ ಆದ ಜಸ್ವೀರ್ ಸಿಂಗ್ ಅವರು X (ಹಿಂದೆ ಟ್ವಿಟರ್) ನಲ್ಲಿ, ತಮಗೆ ಬಂದ “ಅತ್ಯಂತ ಪ್ರಾಮಾಣಿಕ ರಜೆಯ ಅರ್ಜಿ” ಎಂದು ಹೇಳಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ ಇಮೇಲ್‌ನ ಸ್ಕ್ರೀನ್‌ಶಾಟ್ ಇತ್ತು, ಅದರಲ್ಲಿ ಬರೆದಿರುವ ವಿಷಯ ಈಗ ವೈರಲ್ ಆಗ್ತಿದೆ.
ಫಿಲ್ಟರ್ ಹಾಕಿ ಮಾತನಾಡಲ್ಲ
“ಹಲೋ ಸರ್, ಇತ್ತೀಚೆಗೆ ನನಗೆ ಬ್ರೇಕಪ್ ಆಯ್ತು, ನಾನು ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ನನಗೆ ಸ್ವಲ್ಪ ವಿರಾಮ ಬೇಕು. ನಾನು ಇಂದು ಮನೆಯಿಂದ ಕೆಲಸ ಮಾಡುತ್ತಿದ್ದೇನೆ, ಆದ್ದರಿಂದ ನಾನು 28 ರಿಂದ 8 ರವರೆಗೆ ರಜೆ ತೆಗೆದುಕೊಳ್ಳಲು ಬಯಸುತ್ತೇನೆ” ಎಂದು ಲೀವ್ ಲೆಟರ್‌ನಲ್ಲಿತ್ತು. ಯಾವುದೇ ಫಿಲ್ಟರ್ ಹಾಕದೆ ಈ ಪೀಳಿಗೆ ಮಾತನಾಡೋದುಂಟು. ಈ ಲೀವ್ ಲೆಟರ್ ನೋಡಿ, ಅನುಮೋದನೆ ನೀಡಲಾಗಿದೆ.
ಈ ಪೋಸ್ಟ್ ವೈರಲ್ ಆಗಿದ್ದು, 2 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಆಗಿದೆ. ಕೆಲವರು “ನಿಜವಾಗಿಯೂ ರಜೆಗೆ ಅಪ್ರೂವ್ ಕೊಟ್ಟಿದ್ದಾರಾ? ಎಂದು ಪ್ರಶ್ನೆ ಮಾಡಿದ್ದರು. ಆಗ ಜಸ್ವೀರ್ ಅವರು ನೇರವಾಗಿ “ರಜೆ ಅನುಮೋದಿಸಲಾಗಿದೆ, ತಕ್ಷಣವೇ” ಎಂದು ಹೇಳಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅನೇಕರು ಉದ್ಯೋಗಿಯ ಪ್ರಾಮಾಣಿಕತೆ, ಬಾಸ್‌ನ ತಿಳುವಳಿಕೆಯನ್ನು ಶ್ಲಾಘಿಸಿದರು.
“ಈ ರೀತಿ ಕಾರಣ ಹೇಳಿ ಲೀವ್ ಕೇಳಿರೋದು ಸಂಪೂರ್ಣವಾಗಿ ಸರಿ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಹಾಸ್ಯಭರಿತವಾಗಿ “ಅಪ್ಪಾ, ತಂದೆ…ಮದುವೆಗೆ ಕೂಡ ಇಷ್ಟು ರಜೆ ತೆಗೆದುಕೊಳ್ಳದ ಜನ ಇದ್ದಾರೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಮಾತ್ರ ರಜೆ ಕೊಟ್ಟವರನ್ನು ಹೊಗಳಿದ್ದಾರೆ. ಇದು ಪ್ರಾಮಾಣಿಕತೆ, ಕೆಲಸದ ಮೇಲೆ ಪರಿಣಾಮ ಬೀರುವಂತಹ ಪರಿಸ್ಥಿತಿ ಎಂದು ಹೇಳಿದ್ದಾರೆ. “ನೀವು ಒಳ್ಳೆಯ ಬಾಸ್, ಮನುಷ್ಯ! ಚಿಯರ್ಸ್” ಎಂದು ಹೊಗಳಿದ್ದಾರೆ.
“ಮಾನವ ಸಂಪನ್ಮೂಲ ನೀತಿಗೆ ಅನುಗುಣವಾದ ಕಾರಣವೇ? ನನ್ನ ದೃಷ್ಟಿಯಲ್ಲಿ, ನೀವು ರಜೆ ಕೊಡಬಾರದಿತ್ತು. ನೀವು ಅವರನ್ನು ಕಚೇರಿಗೆ ಬಂದು ಸಹೋದ್ಯೋಗಿಗಳನ್ನು ಭೇಟಿ ಮಾಡಲು ಪ್ರೋತ್ಸಾಹಿಸಬೇಕಿತ್ತು – ಒಂಟಿತನ ಸಹಾಯ ಮಾಡುವುದಿಲ್ಲ. gen z ಪೀಳಿಗೆಯವರು ಬ್ರೇಕಪ್ ಆದ ತಕ್ಷಣ ರಜೆ ಕೇಳುತ್ತಾರೆ. ಮಿಲೇನಿಯಲ್‌ಗಳು ಇದರಿಂದ ಕುಸಿದು, ವಾಶ್‌ರೂಂನಲ್ಲಿ ಅಳುತ್ತಾ ಕೆಲಸ ಮಾಡುತ್ತಿದ್ದರು. ಆಫೀಸ್‌ನಲ್ಲಿ ಬದಲಾಗುತ್ತಿರುವ ಯೋಚನೆಗಳು, gen z ಮಕ್ಕಳ ಮನಸ್ಥಿತಿಯ ಬಗ್ಗೆ ಕೂಡ ಚರ್ಚೆ ಶುರುವಾಗಿದೆ.