ಜ್ವರಕ್ಕೆ ಬಂದ ಬಾಲಕಿಗೆ ‘ಗರ್ಭಿಣಿ’ ತಪ್ಪು ವರದಿ ನೀಡಿದ ವೈದ್ಯ; ಆರೋಗ್ಯ ಇಲಾಖೆಗೆ ದೂರು, ವೈದ್ಯಾಧಿಕಾರಿ ವರ್ಗಾವಣೆ!

ಸುಬ್ರಹ್ಮಣ್ಯ: ಜ್ವರಕ್ಕೆ ಚಿಕಿತ್ಸೆ ಪಡೆಯಲು ಬಂದ ಬಾಲಕಿಯನ್ನು ಪರಿಶೀಲಿಸಿದ ವೈದ್ಯಾಧಿಕಾರಿ ಆಕೆ ಗರ್ಭಿಣಿ ಎಂಬ ತಪ್ಪು ವರದಿ ನೀಡಿದ್ದ ಹಿನ್ನೆಲೆ ವೈದ್ಯರ ವಿರುದ್ಧ ಆರೋಗ್ಯ ಇಲಾಖೆಗೆ ದೂರು ನೀಡಲಾಗಿದೆ.

ಸುಳ್ಯ ತಾಲೂಕಿನ ಗ್ರಾಮವೊಂದರ 13 ವರ್ಷದ ಬಾಲಕಿ ಜ್ವರದ ಹಿನ್ನೆಲೆ ಚಿಕಿತ್ಸೆಗಾಗಿ ಶನಿವಾರ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು.
ತಪಾಸಣೆ ಮಾಡಿದ ವೈದ್ಯಾಧಿಕಾರಿ, ಮೂತ್ರ ಮತ್ತು ರಕ್ತ ಪರೀಕ್ಷೆಗೆ ಲ್ಯಾಬ್‌ಗೆ ಚೀಟಿ ನೀಡಿದ್ದರು. ತಪಾಸಣೆ ನಂತರ ಯುಪಿಟಿ ಪಾಸಿಟಿವ್ (ಗರ್ಭಿಣಿ) ಎಂದು ಬರೆದು, ಇನ್ನಷ್ಟು ತಪಾಸಣೆಗಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದರು.
ತಬ್ಬಿಬ್ಬಾದ ಬಾಲಕಿಯ ಹೆತ್ತವರು ಆಕೆ ಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ಮಗಳು ಗರ್ಭಿಣಿ ಅಲ್ಲ ಎಂಬ ವರದಿ ಲಭಿಸಿದೆ. ಸುಳ್ಳು ಮಾಹಿತಿಯಿಂದಾಗಿ ನಮ್ಮ ಕುಟುಂಬಕ್ಕೆ ಭಾರಿ ಮಾನಸಿಕ ನೋವನ್ನು ಉಂಟುಮಾಡಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಬಾಲಕಿಯ ಹೆತ್ತವರು ದೂರು ನೀಡಿದ್ದಾರೆ. ಈ ಹಿನ್ನೆಲೆ ಆರೋಗ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
