ದಿನಕ್ಕೆ 10 ಗಂಟೆ ಪಬ್ಜಿ ಫೋನ್ ಕಸಿದುಕೊಂಡರೆಂದು ಪ್ರಾಣ ಬಿಟ್ಟ ಬಾಲಕ

ಪಬ್ಜಿ ಚಟಕ್ಕೆ ದಾಸನಾಗಿದ್ದ ಬಾಲಕನೋರ್ವ ಪೋಷಕರು ಪೋನ್ ಕಸಿದುಕೊಂಡರು ಎಂದು ಸಾವಿಗೆ ಶರಣಾದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈತ ಸದಾ ಫೋನ್‌ನಲ್ಲಿಯೇ ಮುಳುಗಿರುತ್ತಿದ್ದ. ಆನ್‌ಲೈನ್ ಫೇಮಸ್ ಗೇಮ್ ಆಗಿರುವ ಪಬ್ಜಿ ಚಟಕ್ಕೆ ಬಿದ್ದಿದ್ದ ಆತ ಓದು ಬರಹ ಬಿಟ್ಟು ಸದಾಕಾಲ ಮೊಬೈಲ್‌ನಲ್ಲೇ ಜೊತಾಡುತ್ತಿದ್ದ, ಇದನ್ನು ನೋಡಿ ನೋಡಿ ಬೇಸತ್ತ ಪೋಷಕರು ಆತನ ಕೈನಿಂದ ಫೋನ್ ಕಿತ್ತು ಆತನಿಗೆ ಸಿಗದಂತೆ ಇಟ್ಟಿದ್ದರು.

ಇದರಿಂದ ನೊಂದ ಬಾಲಕ ಸಾವಿಗೆ ಶರಣಾಗಿದ್ದಾನೆ. ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕನನ್ನು ಬೆಟಿ ರಿಶೆಂದರ್ ಎಂದು ಗುರುತಿಸಲಾಗಿದೆ.
ದಿನದ 10 ಗಂಟೆ ಪಬ್ಜಿ ಆಡುತ್ತಿದ್ದ ಬಾಲಕ
ಪಬ್ಜಿ ಚಟಕ್ಕೆ ದಾಸನಾಗಿದ್ದ ಈ ಬಾಲಕ ದಿನದ 10 ಗಂಟೆಯೂ ಫೋನ್‌ನಲ್ಲಿಯೇ ಮುಳುಗಿರುತ್ತಿದ್ದ. ಅತಿರೇಕ ಎಂಬಂತೆ ಈತ ತನಗೆ ಪಬ್ಜಿ ಆಡುವುದಕ್ಕೆ ಸಮಯವೇ ಸಿಗುತ್ತಿಲ್ಲ ಎಂದು ಹೇಳಿ ಶಾಲೆಯ ತರಗತಿಗಳಿಗೂ ಹಾಜರಾಗುತ್ತಿರಲಿಲ್ಲ, ಈತನ ಅವತಾರವನ್ನು ನೋಡುವಷ್ಟು ನೋಡಿದ ಪೋಷಕರು ಆತನನ್ನು ಕೌನ್ಸೆಲಿಂಗ್‌ಗಾಗಿ ಮಾನಸಿಕ ತಜ್ಞ ವೈದ್ಯರು ಹಾಗೂ ನರಶಸ್ತ್ರಜ್ಞರ ಬಳಿಗೂ ಕರೆದುಕೊಂಡು ಹೋಗಿದ್ದ ಆದರೆ ಆತನ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿರಲಿಲ್ಲ. ಅಲ್ಲದೇ ಆಸ್ಪತ್ರೆಗೆ ಕರೆದೊಯ್ದಿದ್ದ ವೇಳೆ ಆತ ಅಲ್ಲಿ ವೈದ್ಯರಿಗೂ ಬೆದರಿಕೆಯೊಡ್ಡಿದ್ದ ಎಂದು ಪೋಷಕರು ಹೇಳಿದ್ದಾರೆ.
ಪೋನ್ ಎತ್ತಿಟ್ಟಿದ್ದಕ್ಕೆ ಜೀವನೇ ಬಿಟ್ಟ:
ಆತನನ್ನು ಸರಿಪಡಿಸುವುದಕ್ಕೆ ತಾವು ಮಾಡಿದ ಯಾವುದೇ ಪ್ರಯತ್ನಗಳು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಮೂರು ದಿನಗಳ ಹಿಂದೆ ಆತನ ಕೈನಿಂದ ಮೊಬೈಲ್ ಕಿತ್ತು ಆತನಿಗೆ ಸಿಗದಂತೆ ಇಟ್ಟಿದ್ದರು. ಆದರೆ ಪಬ್ಜಿ ಚಟಕ್ಕೆ ದಾಸನಾಗಿದ್ದ ಮಗನಿಗೆ ಮೊಬೈಲ್ ಇಲ್ಲದೇ ಒದ್ದಾಡಲು ಶುರು ಮಾಡಿದ್ದ. ಅಲ್ಲದೇ ಅಪ್ಪ ಅಮ್ಮ ತನ್ನ ಒಳ್ಳೆಯತನಕ್ಕೆ ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಸೀದಾ ಹೋಗಿ ನೇಣಿಗೆ ಶರಣಾಗಿದ್ದಾನೆ. ಪಬ್ಜಿ ಚಟಕ್ಕೆ ಸಿಲುಕಿ ಸಾವಿಗೆ ಶರಣಾದ ಘಟನೆ ಇದೇ ಮೊದಲಲ್ಲ ಈ ಹಿಂದೆಯೂ ಹಲವು ಘಟನೆಗಳು ನಡೆದಿವೆ.
ಈ ರೀತಿಯ ಘಟನೆ ಇದೇ ಮೊದಲಲ್ಲ:
ಈ ವರ್ಷದ ಆರಂಭದಲ್ಲಿ, ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಹಳಿಗಳ ಮೇಲೆ ಕುಳಿತು ಮೊಬೈಲ್ ಗೇಮ್ ಆಡುತ್ತಿದ್ದ ಮೂವರು ಹದಿಹರೆಯದ ತರುಣರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದರು. ಈ ಮಕ್ಕಲು ಇಯರ್‌ಫೋನ್ ಧರಿಸಿದ್ದರಿಂದ ಅವರಿಗೆ ರೈಲು ಸಮೀಪಿಸುತ್ತಿರುವುದು ಗಮನಕ್ಕೆ ಬಾರದೇ ಈ ದುರಂತ ಸಂಭವಿಸಿತ್ತು. ಹಾಗೆಯೇ
ಮತ್ತೊಂದು ಘಟನೆಯಲ್ಲಿ, ಹೈದರಾಬಾದ್‌ನಲ್ಲಿ ಕ್ಯಾಬ್ ಚಾಲಕನೊಬ್ಬ ಚಾಲನೆ ಮಾಡುವಾಗಲೇ ತನ್ನ ಫೋನ್‌ನಲ್ಲಿ ಆಡುತ್ತಿರುವುದನ್ನುತೋರಿಸುವ ಒಂದು ಕಳವಳಕಾರಿ ವೀಡಿಯೊ ವೈರಲ್ ಆಗಿತ್ತು.
ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಆತನ ಗ್ರಾಹಕ ಈ ದೃಶ್ಯ ಸೆರೆಹಿಡಿದಿದ್ದ. ಈ ದೃಶ್ಯಗಳಲ್ಲಿ ಚಾಲಕ ಒಂದು ಕೈಯಿಂದ ವಾಹನ ಚಲಾಯಿಸುತ್ತಿದ್ದರೆ, ಇನ್ನೊಂದು ಕೈಯಿಂದ ತನ್ನ ಫೋನ್ ಅಲ್ಲಿ ಗೇಮ್ ಆಡುತ್ತಿರುವುದು ಸೆರೆಯಾಗಿತ್ತು.ಕೆಲವೊಮ್ಮೆ, ಚಾಲಕ ಆಟವಾಡಲು ಎರಡೂ ಕೈಗಳನ್ನು ಬಳಸುತ್ತಿದ್ದು, ಹಿಂದೆ ಕುಳಿತಿದ್ದ ಚಾಲಕನಿಗೆ ಪ್ರಾಣಭಯ ಶುರುವಾಗಿತ್ತು.
ಒಟ್ಟಿನಲ್ಲಿ ಮೊಬೈಲ್ ಹಾಗೂ ಆನ್‌ಲೈನ್ ಗೇಮ್‌ಗಳಿಗೆ ದಾಸರಾದವರನ್ನು ಅದರಿಂದ ಹೊರತರುವುದೇ ಮುಂದಿನ ದಿನಗಳಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಇಷ್ಟು ದಿನ ಕುಡುಕರಿಗೆ ಮಧ್ಯವರ್ಜನ ಶಿಬಿರ, ಗಾಂಜಾ ಮುಂತಾದ ಡ್ರಗ್‌ಗಳಿಗೆ ತುತ್ತಾದವರಿಗೆ ಚಟ ನಿರ್ಮೂಲನೆ ಶಿಬಿರ ಮಾಡಲಾಗುತ್ತಿತ್ತು. ಆದರೆ ಮುಂದೆ ಮೊಬೈಲ್ ಚಟಕ್ಕೆ ಒಳಗಾದ ಯುವ ಸಮುದಾಯಕ್ಕೆ ಮೊಬೈಲ್ ಚಟ ನಿರ್ಮೂಲನೆ ಶಿಬಿರ ಮಾಡಬೇಕಾದ ಅಗತ್ಯ ಬಂದೊದಗಬಹುದು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
