ಕೇಕ್ ಒಳಗೆ ಅಸಹಜವಾಗಿ ‘ಬೂಸ್ಟ್’ ಪುಡಿ ಪತ್ತೆ; ಬೇಕರಿ ಮಾಲೀಕನ ವಿರುದ್ಧ ಸಾರ್ವಜನಿಕರ ಆಕ್ರೋಶ!

ಗದಗ: ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬೇಕರಿಯೊಂದರಲ್ಲಿ ‘ಬೂಸ್ಟ್’ (Boost) ಪುಡಿಯನ್ನು ಅಸಹಜವಾಗಿ ತುಂಬಿದ ಕೇಕ್ ಮಾರಾಟ ಮಾಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಶಿರೋಳ ಗ್ರಾಮದ ‘ಬೆಂಗಳೂರು ಬೇಕರಿ’ಯಲ್ಲಿ ಗ್ರಾಹಕರೊಬ್ಬರು ಕೇಕ್ ಖರೀದಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಕೇಕ್ನ ಒಳಭಾಗದಲ್ಲಿ ಬೂಸ್ಟ್ ಪುಡಿಯನ್ನು ವಿಪರೀತವಾಗಿ ತುಂಬಲಾಗಿದೆ. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಹೆಚ್ಚು ಲಾಭಕ್ಕಾಗಿ ಹಾಗೂ ಹಳೆಯ ಕೇಕ್ಗಳು ಮಾರಾಟವಾಗಲು ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ನರಗುಂದ ತಾಲೂಕಿನ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
