81 ವರ್ಷಗಳ ಬಳಿಕ ಗ್ರಂಥಾಲಯಕ್ಕೆ ಮರಳಿದ ಪುಸ್ತಕ: ₹40,000 ದಂಡದ ಬದಲು ಸಿಬ್ಬಂದಿಗೆ ಅಚ್ಚರಿ ಮೂಡಿಸಿದ ಬರಹ!

ಹೆಚ್ಚಿನ ಜನರು ಗ್ರಂಥಾಲಯ(Library)ಕ್ಕೆ ಹೋಗಿ ಪುಸ್ತಕಗಳನ್ನು ಓದಲು ಇಷ್ಟಪಡುತ್ತಾರೆ. ಗ್ರಂಥಾಲಯದಲ್ಲಿ ತಮ್ಮ ನೆಚ್ಚಿನ ಪುಸ್ತಕವನ್ನು ಓದುವ ಆನಂದವೇ ಬೇರೆ. ಈ ಪ್ರಶಾಂತವಾದ ಸ್ಥಳದಲ್ಲಿ ಕೆಲವರು ಪುಸ್ತಕದ ಅರ್ಧದಷ್ಟು ಓದೇ ಬಿಡುತ್ತಾರೆ. ಆದರೆ ಕೆಲವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಪಡೆದು ಮನೆಗೆ ತೆಗೆದುಕೊಂಡು ಹೋಗಿ ಆರಾಮವಾಗಿ ಓದುತ್ತಾರೆ. ಆದರೆ ಗ್ರಂಥಾಲಯದಲ್ಲಿ ಕಂಡುಬರುವ ಬಹಳ ಸಾಮಾನ್ಯವಾದ ಸಮಸ್ಯೆಯೆಂದರೆ ಜನರು ಪುಸ್ತಕಗಳನ್ನು ಹಿಂತಿರುಗಿಸುವುದಿಲ್ಲ. ದೀರ್ಘಕಾಲದವರೆಗೆ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಹಾಗೆ ಬಹಳ ಸಮಯದವರೆಗೆ ಪುಸ್ತಕಗಳನ್ನು ಕೊಡದೆ ಇದ್ದರೆ ಹೆಚ್ಚುವರಿ ವಿಳಂಬ ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.

ಇದು ಒಂದು ಕತೆಯಾದರೆ, ಮತ್ತೆ ಕೆಲವರು ದುಡ್ಡು ಕೊಡದೆ, ಪುಸ್ತಕಗಳನ್ನೂ ಹಿಂತಿರುಗಿಸದೆ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಅನೇಕ ಬಾರಿ ಬ್ಯುಸಿ ಲೈಫ್‌ಸ್ಟೈಲ್‌ನಿಂದಾಗಿ ಕೆಲವರು ಆ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಹಿಂತಿರುಗಿಸಲು ಮರೆತುಬಿಡುತ್ತಾರೆ. ಗ್ರಂಥಾಲಯದ ಪುಸ್ತಕಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಲು ಸಮಯ ಮಿತಿ ಇದೆ. ಸಮಯ ಮಿತಿ ತಡವಾದರೆ, ಪ್ರತಿದಿನವೂ ದಂಡ ವಿಧಿಸಲಾಗುತ್ತದೆ. ಇತ್ತೀಚೆಗೆ, ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ, ಇದರಲ್ಲಿ ಒಬ್ಬ ವ್ಯಕ್ತಿ ಗ್ರಂಥಾಲಯದ ಪುಸ್ತಕವನ್ನು ಹಿಂತಿರುಗಿಸಲು ಬಂದಾಗ, ಅಲ್ಲಿದ್ದ ಸಿಬ್ಬಂದಿ ಕೂಡ ದಿಗ್ಭ್ರಮೆಗೊಂಡರು. ಯಾಕೆ ಅಂತೀರಾ?, ಮುಂದೆ ಓದಿ…
ಅಂದಹಾಗೆ ಕೋವಿಡ್ ಸಮಯದಲ್ಲಿ ಒಂದು ಅಭಿಯಾನವನ್ನು ನಡೆಸಲಾಯಿತು. ಇದರಲ್ಲಿ ಪುಸ್ತಕಗಳನ್ನು ಹಿಂತಿರುಗಿಸುವಂತೆ ಕೇಳಿಕೊಳ್ಳಲಾಯಿತು. ಅಂದಿನಿಂದ ಅನೇಕ ಜನರು ವರ್ಷಗಟ್ಟಲೇ ತಮ್ಮೊಂದಿಗೆ ಇಟ್ಟುಕೊಂಡಿದ್ದ ಹಳೆಯ ಪುಸ್ತಕಗಳನ್ನು ಹಿಂತಿರುಗಿಸಿದರು. ಅದರಲ್ಲಿ ಒಬ್ಬ ವ್ಯಕ್ತಿ 81 ವರ್ಷಗಳ ನಂತರ ಪುಸ್ತಕವನ್ನು ಹಿಂದಿರುಗಿಸಿದನು. ಅದು ಕೂಡ ಕೆಲವೇ ಪುಟಗಳನ್ನು ಓದಿದ ನಂತರ. ಹೌದು, ಒಬ್ಬ ವ್ಯಕ್ತಿ ಬಹಳ ಸಮಯದ ನಂತರ ಗ್ರಂಥಾಲಯದಿಂದ ನೀಡಲಾದ ಪುಸ್ತಕವನ್ನು ಪ್ರಸ್ತುತ ಸಿಬ್ಬಂದಿಗೆ ಹಸ್ತಾಂತರಿಸಿದಾಗ, ಸಿಬ್ಬಂದಿಯ ಪ್ರತಿಕ್ರಿಯೆ ನೋಡಲೇಬೇಕಾದ ಸಂಗತಿಯಾಗಿತ್ತು. ಈ ಘಟನೆ ನಡೆದಿರುವುದು ಅಮೆರಿಕದ ವಾಷಿಂಗ್ಟನ್‌ನ ಅಬರ್ಡೀನ್‌ನಲ್ಲಿ. ಪುಸ್ತಕವನ್ನು ಮಾರ್ಚ್ 30, 1942 ರಂದು ಅಬರ್ಡೀನ್ ಟಿಂಬರ್‌ಲ್ಯಾಂಡ್ ಗ್ರಂಥಾಲಯದಿಂದ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು 81 ವರ್ಷಗಳ ನಂತರ ಒಬ್ಬ ವ್ಯಕ್ತಿ ಗ್ರಂಥಾಲಯಕ್ಕೆ ಹಿಂತಿರುಗಿಸಿದನು. ನಂತರ ಗ್ರಂಥಾಲಯವು ತನ್ನ ಫೇಸ್‌ಬುಕ್ ಪುಟದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿತು. ಆಶ್ಚರ್ಯಕರ ಸಂಗತಿಯೆಂದರೆ, ಇಷ್ಟು ಸಮಯವಾದರೂ ಆ ವ್ಯಕ್ತಿಯು ಪುಸ್ತಕದ ಕೇವಲ 17 ಪುಟಗಳನ್ನು ಮಾತ್ರ ಓದಿದ್ದಾನೆ.

ಪುಸ್ತಕ ತೆಗೆದುಕೊಂಡಿದ್ದು ಯಾರು?
ಸಿಎನ್ಎನ್ ವರದಿಯ ಪ್ರಕಾರ, ವಾಷಿಂಗ್ಟನ್‌ನ ಒಲಿಂಪಿಯಾದಲ್ಲಿ ವಾಸಿಸುವ ಬ್ರಾಡ್ ಬಿಟ್ಟರ್ ಮಾರ್ಚ್ 1942 ರಲ್ಲಿ ಪ್ರಕಟವಾದ ಚಾರ್ಲ್ಸ್ ನಾರ್ಡಾಫ್ ಮತ್ತು ಜೇಮ್ಸ್ ನಾರ್ಮನ್ ಹಾಲ್ ಅವರ ‘ದಿ ಬೌಂಟಿ ಟ್ರೈಲಜಿ’ ಪುಸ್ತಕವನ್ನು 81 ವರ್ಷಗಳ ನಂತರ ಅಬರ್ಡೀನ್ ಟಿಂಬರ್‌ಲ್ಯಾಂಡ್ ಗ್ರಂಥಾಲಯಕ್ಕೆ ಹಿಂದಿರುಗಿಸಿದನು. ಆದರೆ ಗ್ರಂಥಾಲಯದಿಂದ ಆ ಪುಸ್ತಕವನ್ನು ತೆಗೆದುಕೊಂಡಿದ್ದು ಅವನಲ್ಲ. “ಪುಸ್ತಕವು ಕೆಲವು ವರ್ಷಗಳ ಕಾಲ ತನ್ನ ಗ್ಯಾರೇಜ್‌ನಲ್ಲಿ ಬಿದ್ದಿತ್ತು. ನಂತರ ಅದನ್ನು ಗ್ರಂಥಾಲಯಕ್ಕೆ ಹಿಂದಿರುಗಿಸಲಾಯಿತು” ಎಂದು ಬ್ರಾಡ್ ಬಿಟ್ಟರ್ ಮಾಧ್ಯಮಗಳಿಗೆ ತಿಳಿಸಿದರು.
“81 ವರ್ಷಗಳ ಹಿಂದೆ ಈ ಪುಸ್ತಕವನ್ನು ತೆಗೆದುಕೊಂಡ ವ್ಯಕ್ತಿ ಯಾರೆಂದು ತನಗೆ ತಿಳಿದಿಲ್ಲ. ಏಕೆಂದರೆ ವಾಷಿಂಗ್ಟನ್‌ನ ಹೊಕ್ವಿಯಮ್‌ನಲ್ಲಿರುವ ತನ್ನ ಕುಟುಂಬದ ಅಂಗಡಿಗೆ ಭೇಟಿ ನೀಡಿದಾಗ ಆತ ಪುಸ್ತಕವನ್ನು ಬಿಟ್ಟು ಹೋಗಿರಬೇಕು” ಎಂದು ಅವರು ಬ್ರಾಡ್ ಬಿಟ್ಟರ್ ಹೇಳಿದರು. ಬ್ರಾಡ್ ಬಿಟ್ಟರ್ ಐತಿಹಾಸಿಕ ಕಲಾಕೃತಿಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ. ಹಾಗಾಗಿ ಅಂಗಡಿಯಿಂದ ಉಳಿದಿರುವ ಪ್ರಾಚೀನ ವಸ್ತುಗಳ ನಡುವೆ ಈ ಪುಸ್ತಕವನ್ನು ಕಂಡುಕೊಂಡರು ಎಂದು ಹೇಳಿದರು. ಬಿಟ್ಟರ್ ಸಿಎನ್‌ಎನ್‌ಗೆ ತಿಳಿಸಿರುವ ಪ್ರಕಾರ, “ಗ್ರಂಥಾಲಯದ ಸಿಬ್ಬಂದಿ ಅದನ್ನು ಹಿಂತಿರುಗಿಸುವಾಗ ಬಹುಶಃ ಅದರ ಬಗ್ಗೆ ಆಸಕ್ತಿ ತೋರುವುದಿಲ್ಲ ಎಂದು ನಾನು ಭಾವಿಸಿದೆ. ಆದರೆ ಅವರು ಪುಸ್ತಕವನ್ನು ಹಿಂದಿರುಗಿಸಿದಾಗ ದಿಗ್ಭ್ರಮೆಗೊಂಡರು” ಎಂದು ತಿಳಿಸಿದ್ದಾರೆ.
ಪುಸ್ತಕದಲ್ಲಿ ಬರೆದಿದ್ದೇನು?
ಪುಸ್ತಕವನ್ನು ಮರಳಿ ಪಡೆದ ನಂತರ, ಗ್ರಂಥಾಲಯದ ಅಧಿಕಾರಿಗಳು ಈ ಪುಸ್ತಕದ ವಿಳಂಬ ಶುಲ್ಕ ಎಷ್ಟು ಎಂದು ಲೆಕ್ಕ ಹಾಕಿದರು. 1942 ರ ದರದ ಪ್ರಕಾರ, ಭಾನುವಾರ ಮತ್ತು ಇತರ ರಜಾದಿನಗಳನ್ನು ಹೊರತುಪಡಿಸಿ, ದಿನಕ್ಕೆ 2 ಸೆಂಟ್ಸ್ $484 (ಸುಮಾರು 40 ಸಾವಿರ ರೂಪಾಯಿಗಳು) ಆಗುತ್ತದೆ. ಆದರೆ ಕಳೆದ ವರ್ಷಗಳಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಗ್ರಂಥಾಲಯವು ವಿಳಂಬ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿತ್ತು. ಆದರೆ ಪುಸ್ತಕವನ್ನು ತೆಗೆದುಕೊಂಡ ವ್ಯಕ್ತಿಯು ಪುಸ್ತಕದ ಒಳಗಿನ ಮುಖಪುಟದಲ್ಲಿ ಬರೆದ ಸಂಗತಿ ಈಗ ಎಲ್ಲೆಡೆ ವೈರಲ್ ಆಗಿದೆ. ಅಷ್ಟಕ್ಕೂ ಅವನು ಬರೆದಿದ್ದೇನು ಎಂದು ನೋಡುವುದಾದರೆ “ನನಗೆ ಹಣ ಕೊಟ್ಟರೂ ಸಹ, ನಾನು ಈ ಪುಸ್ತಕವನ್ನು ಓದುವುದಿಲ್ಲ” ಇದನ್ನು ನೋಡಿ ಗ್ರಂಥಪಾಲಕರು ಆಶ್ಚರ್ಯಚಕಿತರಾದರು.
ಪ್ರಸ್ತುತ ಗ್ರಂಥಾಲಯವು ತನ್ನ ಫೇಸ್‌ಬುಕ್ ಪುಟದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, “ನಿಮಗೆ ನೀಡಲಾದ ಯಾವುದೇ ಪುಸ್ತಕವು ಧೂಳು ಹಿಡಿಯುತ್ತಿದ್ದರೆ ಅದನ್ನು ಗ್ರಂಥಾಲಯಕ್ಕೆ ಹಿಂತಿರುಗಿಸಿ. ನಾವು ಅದನ್ನು ಉಡುಗೊರೆಯಾಗಿ ಪರಿಗಣಿಸುತ್ತೇವೆ ಮತ್ತು ದಂಡವನ್ನು ಕೇಳುವುದಿಲ್ಲ” ಎಂದಿದೆ.
