ಕಸಬ್, ಅತ್ಯಾಚಾರ ಪ್ರಕರಣದ ನೆಪದಲ್ಲಿ ಬಾಂಬ್ ಬೆದರಿಕೆ: ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ, ಶಾಲೆಗಳಿಗೆ ಇ-ಮೇಲ್ – ಕಿಡಿಗೇಡಿಯ ಸವಾಲು

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಗರದ 2 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದು, ಪೊಲೀಸರ ತಪಾಸಣೆ ಬಳಿಕ ಹುಸಿ ಸಂದೇಶ ಎಂಬುದು ಬೆಳಕಿಗೆ ಬಂದಿದೆ.

ಕಸಬ್ ನೇಣುಗೇರಿಸಿದ್ದು ಸರಿಯಲ್ಲ
ಜೂನ್ 16ರಂದು ಮಧ್ಯಾಹ್ನ ರಾತ್ರಿ 10.18ರ ಸಮಾರಿಗೆ ಅಲೆಕ್ಸ್ ಪೌಲ್ ಮೆನನ್ ಎಂಬ ಹಾಟ್ ಮೇಲ್ ವಿಳಾಸದಿಂದ ವಿಮಾನ ನಿಲ್ದಾಣದ ಕಸ್ಟಮರ್ ಕೇರ್ ಮತ್ತು ಭದ್ರತಾ ವಿಭಾಗದ ಇ-ಮೇಲ್ ವಿಳಾಸಕ್ಕೆ ಸಂದೇಶ ಬಂದಿದೆ. ಈ ಸಂದೇಶದ ಪ್ರಕಾರ, ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸಿರುವುದು ಸರಿಯಲ್ಲ ಹಾಗೂ ಐಪಿಎಸ್ ಅಧಿಕಾರಿ ಪಲ್ಲನ್ ಎ ಅರುಣ್ ಅವರಿಂದ ಸಾವುಕು ಶಂಕರ್ ಅವರನ್ನು ಅಕ್ರಮವಾಗಿ ಬಂಧಿಸಿರುವುದು ತಪ್ಪು. ಹೀಗಾಗಿ ನಾವು ಬಾಂಬ್ ಇಡುತ್ತಿದ್ದೇವೆ. ವಿಮಾನ ನಿಲ್ದಾಣದ ಶೌಚಾಲಯ ಮತ್ತು ಅದರ ಪೈಪ್‌ನಲ್ಲಿ ಐಇಡಿ ಬಾಂಬ್ ಇರಿಸಲಾಗಿದೆ. ಪಝಲ್ ಗೇಮ್ ರೀತಿ ಪ್ಲ್ರಾನ್ ಎ ಫೇಲ್ ಆದರೆ, ಪ್ಲ್ರಾನ್ ಬಿ ಎಂದು ಸಂದೇಶದಲ್ಲಿ ಉಲ್ಲೇಖೀಸಲಾಗಿದೆ.

ಈ ಸಂದೇಶ ಕಂಡ ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಅಧಿಕಾರಿಗಳು ಕೂಡಲೇ ಎಲ್ಲೆಡೆ ತಪಾಸಣೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಕೂಡ ವಿಮಾನ ನಿಲ್ದಾಣ ತಪಾಸಣೆ ನಡೆಸಿದ್ದಾರೆ. ಆಗಲೂ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ವಿಮಾನ ನಿಲ್ದಾಣದ ಟರ್ಮಿನಲ್ -2 ಮ್ಯಾನೇಜರ್ ಪಿ.ಸಿ.ತಿಮ್ಮಣ್ಣ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿ ಇದೇ ರೀತಿ ದೇಶದ ಇತರೆ ವಿಮಾನ ನಿಲ್ದಾಣಗಳಿಗೆ ಇ-ಮೇಲ್ ಸಂದೇಶ ಕಳುಹಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
2 ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ: ನಗರದ ಎರಡು ಖಾಸಗಿ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದಾನೆ. ಪುಲಕೇಶಿನಗರದ ಕ್ಲಾರೆನ್ಸ್ ಶಾಲೆ ಮತ್ತು ಗೋವಿಂದಪುರ ಇಂಡಿಯನ್ ಪಬ್ಲಿಕ್ ಶಾಲೆಗೂ ಬೆದರಿಕೆ ಸಂದೇಶ ಕಳುಹಿಸಿದ್ದ. ವಿಷಯ ತಿಳಿದ ಪೊಲೀಸರು ಎರಡು ಶಾಲೆಗಳನ್ನು ತಪಾಸಣೆ ನಡೆಸಿದ್ದಾರೆ. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ಪುಲಕೇಶಿನಗರ ಮತ್ತು ಗೋವಿಂದಪುರ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ಶಾಲೆಗೆ ಜೂನ್ 19ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಭಾಕರ್ ದಿವಿಜ್ ಎಂಬ ಇ-ಮೇಲ್ ವಿಳಾಸದಿಂದ ಸಂದೇಶ ಬಂದಿದೆ. ನಮ್ಮ ಸಂದೇಶವನ್ನು ಹಗುರವಾಗಿ ಪರಿಗಣಿಸಬೇಡಿ. ಶಾಲಾ ಮಕ್ಕಳನ್ನು ಕೊಲ್ಲುವುದು ನಮ್ಮ ಉದ್ದೇಶವಲ್ಲ. ಆದರೆ, 2023ರಲ್ಲಿ ಹೈದರಾಬಾದ್‌ನ ಲೆಮೆನ್ ಟ್ರೀ ಎಂಬ ಹೋಟೆಲ್‌ನಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಬೇಕು. ದಿವಿಜ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಈತ ಬೆಂಗಳೂರಿನಲ್ಲಿ ವಾಸವಾಗಿದ್ದು, ಹೈದರಾಬಾದ್‌ಗೆ ಬಂದು ಯುವತಿಯನ್ನು ಕಾರಿನಲ್ಲಿ ಹೋಟೆಲ್‌ಗೆ ಕರೆದೊಯ್ದು, ಮದ್ಯ ಕುಡಿಸಿ, ಅತ್ಯಾಚಾರ ಎಸಗಿದ್ದಾನೆ. ಬಳಿಕ ನಗ್ನ ಫೋಟೋಗಳನ್ನು ತೆಗಿದಿದ್ದಾನೆ. ಆದ್ದರಿಂದ ಪೊಲೀಸರು ಹೋಟೆಲ್‌ನ ಸಿಸಿ ಕ್ಯಾಮೆರಾ ಪರಿಶೀಲಿಸಬೇಕು. ಆತನ ಕಾಲ್ ಡಿಟೇಲ್ಸ್, ಪ್ರಯಾಣದ ವಿವರಗಳು, ಬ್ಯಾಂಕ್ ಖಾತೆ ವಿವರಗಳು ಪರಿಶೀಲಿಸಬೇಕು. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಆಗ ಸತ್ಯಾಂಶ ಹೊರಗೆ ಬರುತ್ತದೆ ಎಂದಿರುವ ಕಿಡಿಗೇಡಿ, ದಿವಿಜ್ ತನ್ನ ತಪ್ಪು ಒಪ್ಪಿಕೊಳ್ಳುವವರೆಗೂ ನಾವು ಸಿಗುವುದಿಲ್ಲ. ಶಾಲೆ ಸ್ಫೋಟಗೊಂಡ ಬಳಿಕ ಪೊಲೀಸರು ಆತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಾರೆ ಎಂದು ಇ-ಮೇಲ್ ಸಂದೇಶದಲ್ಲಿ ತಿಳಿಸಲಾಗಿದೆ.
ತ.ನಾಡಿನ ಅರ್ಥಶಾಸ್ತ್ರಜ್ಞನ ಮನೆ ಸ್ಪೋಟಿಸುವುದಾಗಿ ಬೆದರಿಕೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿದ ಬೆದರಿಕೆ ಸಂದೇಶದಲ್ಲಿ ತಮಿಳುನಾಡು ಮೂಲದ ಅರ್ಥಶಾಸ್ತ್ರಜ್ಞ ಜೆ.ಜಯರಂಜನ್ ಅವರ ಮನೆಯಲ್ಲೂ ಸ್ಫೋಟಿ ಸುವುದಾಗಿ ಉಲ್ಲೇಖೀಸಲಾಗಿದೆ. ಹೀಗಾಗಿ ತಮಿಳುನಾಡು ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪೊಲೀಸರಿಗೆ ಸವಾಲು ಹಾಕಿದ ಕಿಡಿಗೇಡಿ
ಖಾಸಗಿ ಶಾಲೆಯಲ್ಲಿ ಬಾಂಬ್ ಸ್ಫೋಟಿ ಸುವ ಮೊದಲು ನಮ್ಮನ್ನು ಹಿಡಿಯುವ ಸಾಧ್ಯವೇ ಎಂದು ಕಿಡಿಗೇಡಿ ಪೊಲೀಸರಿಗೆ ಸವಾಲು ಹಾಕಿದ್ದಾನೆ. ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.