ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ತಮಿಳುನಾಡಿನಲ್ಲಿ ಆರೋಪಿ ಬಂಧನ

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಕರೆ ಮಾಡಿದ ಆರೋಪಿಯನ್ನು ಬಜ್ಪೆ ಠಾಣೆ ಪೊಲೀಸರು ತಮಿಳುನಾಡಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ನಿವಾಸಿ ಸಸಿಕುಮಾರ್ (38) ಎಂಬಾತ ಬಂಧಿತ. ವೆಲ್ಲೂರ್ ನಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಫೋನ್ ಕರೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಅಗಸ್ಟ್ 29 ರಂದು ರಾತ್ರಿ ಮಂಗಳೂರು ಏರ್ಪೋರ್ಟ್ ಗೆ ಫೋನ್ ಕರೆ ಬಂದಿದ್ದು ಡ್ಯೂಟಿಯಲ್ಲಿದ್ಧ ಟರ್ಮಿನಲ್ ಮ್ಯಾನೇಜರ್ ಬಜಪೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಮೊ.ನಂ 156/2025 ಕಲಂ 351(2), 351(3) BNS ಮತ್ತು ವಿಮಾನ ನಿಲ್ದಾಣಗಳ ಭದ್ರತೆಗೆ ಆತಂಕ ಒಡ್ಡುವುದನ್ನು ನಿರ್ಬಂಧಿಸುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವೆಲ್ಲೂರ್ ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದೇಶದ ಎಲ್ಲಾ ವಿಮಾನ ನಿಲ್ದಾಣಗಳ ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಸರ್ಚ್ ಮಾಡಿ ಕರೆ ಮಾಡಿ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾನೆ. ಅದೇ ತರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಫೋನ್ ಮಾಡಿ ಟರ್ಮಿನಲ್ ಬಿಲ್ಡಿಂಗ್ ನ್ನು ಖಾಲಿ ಮಾಡಲು ತಿಳಿಸಿ ಖಾಲಿ ಮಾಡದೆ ಹೋದರೆ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾನೆ. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
