ಪಾಕಿಸ್ತಾನಕ್ಕೆ ಬಿಎಲ್ಎ ಡೆಡ್ಲೈನ್! 7 ಸೈನಿಕರ ಜೀವ ಉಳಿಸಲು 6 ದಿನ ಮಾತ್ರ ಬಾಕಿ

ಇಸ್ಲಾಮಾಬಾದ್: ಬಲೂಚ್ ಲಿಬರೇಶನ್ ಆರ್ಮಿ ಪಾಕಿಸ್ತಾನದ ಭದ್ರತಾ ಪಡೆಗಳ ಏಳು ಸಿಬ್ಬಂದಿಯನ್ನು ಕಸ್ಟಡಿಯಲ್ಲಿ ಇರಿಸಿರುವುದಾಗಿ ಹೇಳಿಕೊಂಡಿದೆ. ಅವರನ್ನು ಬಿಡುಗಡೆ ಮಾಡಲು ಕೈದಿಗಳ ವಿನಿಮಯಕ್ಕಾಗಿ ಪಾಕಿಸ್ತಾನ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿರುವ ಬಲೂಚ್ ಆರ್ಮಿ, ಆ ಅವಧಿಯೊಳಗೆ ಮಾತುಕತೆ ನಡೆಯದಿದ್ದರೆ ಬಂಧಿತರಿಗೆ ಮರಣದಂಡನೆ ವಿಧಿಸಬಹುದು ಎಂದು ಖಡಕ್ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯ ಮಾಧ್ಯಮ ವಿಭಾಗ ಹಕ್ಕಲ್, “ಗಡುವು ಮುಗಿಯಲು ಆರು ದಿನಗಳು ಮಾತ್ರ ಉಳಿದಿವೆ. ನಮ್ಮವರನ್ನು ಒಪ್ಪಿಸಿ, ಇದು ಅಂತಿಮ ಎಚ್ಚರಿಕೆ ಎಂದು ಪಾಕ್ಗೆ ಬಲೂಚ್ ಲಿಬರೇಶನ್ ಆರ್ಮಿ ಎಚ್ಚರಿಕೆ ರವಾನಿಸಿದೆ. ಈ ಬಗ್ಗೆ ಪಾಕಿಸ್ತಾನದ ಸೇನೆ ಅಥವಾ ಅಧಿಕಾರಿಗಳು ಯಾವುದೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ” ಎಂದು ತಿಳಿಸಿದೆ.”ಬಂಧಿತರನ್ನು ಆಪರೇಷನ್ ಹೆರೋಫ್ 2ನೇ ಹಂತದ ಸಮಯದಲ್ಲಿ ಸೆರೆಹಿಡಿಯಲಾಗಿದೆ. ಕಾರ್ಯಾಚರಣೆಯ ವೇಳೆ ಪಾಕ್ ಪಡೆಯ ಒಟ್ಟು 17 ಸಿಬ್ಬಂದಿಯನ್ನು ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿದೆ. ಬಂಧಿತರಲ್ಲಿ 10 ಮಂದಿ ಸ್ಥಳೀಯ ಬಲೂಚ್ ಜನಾಂಗದವರು ಎಂದು ಗುರುತಿಸಲಾಗಿತ್ತು. ಅವರು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದರಿಂದ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು. ಅವರ ಬಿಡುಗಡೆ ನಿರ್ಧಾರವನ್ನು ಬಲೂಚ್ ಜನರ ಹಿತಾಸಕ್ತಿ ಎಂದು ಪರಿಗಣಿಸಲಾಗಿದೆ” ಎಂದು ಬಿಎಲ್ಎ ಹೇಳಿದೆ.”ಉಳಿದ ಏಳು ಬಂಧಿತರು ಪಾಕಿಸ್ತಾನಿ ಸೇನೆಯ ಘಟಕಗಳ ಸಿಬ್ಬಂದಿಯಾಗಿದ್ದಾರೆ.

ಅವರು ತಮ್ಮ ವಶದಲ್ಲಿಯೇ ಇದ್ದಾರೆ. ಅವರನ್ನು ಬಲೂಚ್ ರಾಷ್ಟ್ರೀಯ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಬಂಧಿತರು ನಾಗರಿಕರ ವಿರುದ್ಧದ ಕ್ರಮಗಳಲ್ಲಿ ಭಾಗಿಯಾಗಿರುವುದು ಮತ್ತು ಬಲೂಚ್ ಜನರ ಹತ್ಯೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ವಿಚಾರಣೆಯ ಸಮಯದಲ್ಲಿ ಆರೋಪಿಗಳಿಗೆ ಪ್ರತಿಕ್ರಿಯಿಸಲು ಅವಕಾಶಗಳನ್ನು ನೀಡಲಾಗಿತ್ತು. ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸಲಾಗಿತ್ತು” ಎಂದು ಸಂಘಟನೆ ಹೇಳಿಕೆ ನೀಡಿದೆ.”ಯುದ್ಧದ ಸಂದರ್ಭಗಳಲ್ಲಿಯೂ ತತ್ವಗಳು, ನಿಯಮಗಳು ಮತ್ತು ಪರಸ್ಪರ ಜವಾಬ್ದಾರಿಗಳು ಅಸ್ತಿತ್ವದಲ್ಲಿವೆ ಎಂದು ಬಲೂಚ್ ಲಿಬರೇಶನ್ ಆರ್ಮಿ ನಂಬುತ್ತದೆ. ಈಗ ಪಾಕ್ ತನ್ನ ಸಿಬ್ಬಂದಿಯ ಜೀವಗಳನ್ನು ರಕ್ಷಿಸಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ? ಅಥವಾ ಎಂದಿನಂತೆ ಮೌನ ಮತ್ತು ಉದಾಸೀನತೆಯ ಮೂಲಕ ತನ್ನ ಬಾಡಿಗೆ ಸಿಬ್ಬಂದಿಯ ಸಾವಿಗೆ ಆದ್ಯತೆ ನೀಡುತ್ತದೆಯೇ?” ಎಂದು ಬಲೂಚ್ ಸೇನೆ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದೆ.