“ನನ್ನ ಮೇಲೆ ಅಸೂಯೆಯಿಂದ ಬಿಜೆಪಿ ಆರೋಪ; ದಾಖಲೆ ಕೊಟ್ಟರೆ ಪರಿಶೀಲನೆ ಮಾಡ್ತೀನಿ” – ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

ಬೆಂಗಳೂರು: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಬಿಜೆಪಿ (BJP) ಆರೋಪಗಳು ನಿರಾಧಾರ. ಪಾರದರ್ಶಕವಾಗಿಯೇ ಎಲ್ಲಾ ಕೆಲಸಗಳು ಆಗಿವೆ. ದಾಖಲೆ ಕೊಟ್ಟರೆ ಪರಿಶೀಲಿನೆ ಮಾಡ್ತೀನಿ ಎಂದು ವಿಧಾನಸಭಾ ಸ್ಪೀಕರ್ ಖಾದರ್ (UT Khader) ಬಿಜೆಪಿ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಜೆಪಿ ನಾಯಕರ ಭ್ರಷ್ಟಾಚಾರ ಆರೋಪ ಸಂಬಂಧ `ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನನ್ನ ಮೇಲೆ ಅಸೂಯೆಯಿಂದ ಬಿಜೆಪಿ ಅವರು ಆರೋಪ ಮಾಡ್ತಿದ್ದಾರೆ. ಪಾರದರ್ಶಕವಾಗಿಯೇ ಎಲ್ಲಾ ಕೆಲಸ ಆಗಿದೆ. ಏನಾದರೂ ದಾಖಲಾತಿ ಇದ್ದರೆ ಬಿಜೆಪಿಯವರು ಬರವಣಿಗೆ ರೂಪದಲ್ಲಿ ದೂರು ಕೊಡಲಿ ಪರಿಶೀಲನೆ ಮಾಡ್ತೀನಿ ಎಂದಿದ್ದಾರೆ.
ನಾನು ಶಾಸಕ, ಮಂತ್ರಿ ಆದಾಗಲೂ ನನ್ನ ಮೇಲೆ ಆರೋಪ ಬಂದಿತ್ತು. ಈಗಲೂ ಬಂದಿದೆ. ಯಾವುದರಲ್ಲೂ ಯಶಸ್ಸು ಆಗಲಿಲ್ಲ. ನನ್ನ ವಿದೇಶ ಪ್ರವಾಸದ ಬಗ್ಗೆ ಕೇಳೋಕೆ ಇವರು ಯಾರು? ರಾಜ್ಯಪಾಲರಿಗಲ್ಲ ಯಾರಿಗಾದ್ರು ದೂರು ಕೊಡಲಿ. ನಾನು ರಾಜೀನಾಮೆ ಕೊಡುವುದಿಲ್ಲ. ನನ್ನ ರಾಜೀನಾಮೆ ಕೇಳಿದಾಗಲೇ ಅವರ ಉದ್ದೇಶ ಗೊತ್ತಾಗಿದೆ. ಮೊದಲು ಅವರು ದಾಖಲಾತಿ ಕೊಡಲಿ ನಂತರ ನಾನು ಪರಿಶೀಲನೆ ಮಾಡ್ತೀನಿ ಎಂದು ಹೇಳಿದ್ದಾರೆ.