ಗೋಮೂತ್ರದಿಂದ ಜಾಗ ಶುದ್ಧೀಕರಿಸಿದ ಬಿಜೆಪಿ ಸಂಸದೆ; ವಿವಾದ ಭುಗಿಲು

ಪುಣೆ: ಪುಣೆಯ ಕೋಟೆಯಲ್ಲಿ ಮುಸ್ಲಿಂ ಮಹಿಳೆಯರು ನಮಾಜ್(Namaz) ಮಾಡಿದ್ದ ಜಾಗವನ್ನು ಬಿಜೆಪಿ ರಾಜ್ಯಸಭಾ ಸಂಸದೆ ಮೇಧಾ ಕುಲಕರ್ಣಿ ಗೋಮೂತ್ರದಿಂದ ಶುದ್ಧೀಕರಿಸಿರುವ ಘಟನೆ ನಡೆದಿದೆ. ಮೇಧಾ ಅವರ ನಡೆ ದ್ವೇಷಪೂರಿತ ಎಂದು ಆರೋಪಿಸಿ ಮಹಾರಾಷ್ಟ್ರದ ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಭಾನುವಾರ ಕುಲಕರ್ಣಿ ಅವರು ಪುಣೆಯ ಐತಿಹಾಸಿಕ ಕೋಟೆ ಶನಿವಾರವಾಡಕ್ಕೆ ಭೇಟಿ ನೀಡಿದ್ದರು, ಹಿಂದುತ್ವ ಕಾರ್ಯಕರ್ತರ ಮೆರವಣಿಗೆಯ ನೃತೃತ್ವವಹಿಸಿದ್ದರು.

ಕೆಲವು ಮುಸ್ಲಿಂ ಮಹಿಳೆಯರು ಈ ಹಿಂದೆ ನಮಾಜ್ ಮಾಡಿದ್ದ ಸ್ಥಳವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದಾಗ ವಿವಾದ ಭುಗಿಲೆದ್ದಿತ್ತು.
ಮುಸ್ಲಿಮರು ಶನಿವಾರವಾಡದಂತಹ ಐತಿಹಾಸಿಕ ಸ್ಥಳಗಳಲ್ಲಿ ನಮಾಜ್ ಮಾಡಿದರೆ, ಹಿಂದೂಗಳಿಗೂ ಮಸೀದಿಗಳಲ್ಲಿ ಆರತಿ ಮಾಡಲು ಅವಕಾಶ ನೀಡಬೇಕು ಎಂದು ಹೇಳುವ ಮೂಲಕ ಸಂಸದೆ ಮೇಧಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯ ವಕ್ತಾರ ಅತುಲ್ ಲೊಂಡೆ ಈ ಕಾರ್ಯವನ್ನು ಟೀಕಿಸುತ್ತಾ, ಮರಾಠವಾಡದ ರೈತರು ಪ್ರವಾಹದಿಂದ ತೀವ್ರವಾಗಿ ತತ್ತರಿಸಲ್ಪಟ್ಟಿರುವ ಮತ್ತು ಈ ಬಿಕ್ಕಟ್ಟಿನಿಂದ ಹೊರಬರಲು ಅವರಿಗೆ ಸಹಾಯ ಮಾಡುವ ಅಗತ್ಯವಿರುವ ಸಮಯದಲ್ಲಿ, ಕುಲಕರ್ಣಿ ದ್ವೇಷಪೂರಿತ ಭಾಷಣದಲ್ಲಿ ತೊಡಗುವ ಮೂಲಕ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ. ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಒಬ್ಬ ಜನಪ್ರತಿನಿಧಿಯು ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡಬೇಕು, ಅದರ ವಿರುದ್ಧವಲ್ಲ ಎಂದು ವಾದಿಸಿದರು.
ಇದು ದುರದೃಷ್ಟಕರ. ಶನಿವಾರವಾಡಾ ನಮಾಜ್ ಮಾಡಲು ಸೂಕ್ತ ಸ್ಥಳವಲ್ಲ. ಆಡಳಿತವು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ (ASI) ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೋಟೆಯಲ್ಲಿ ನಾಮಾಜ್ ಮಾಡಿದ ಅಪರಿಚಿತ ಮಹಿಳೆಯರ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.