ಬಿಜೆಪಿ ಶಾಸಕರ ಅಮಾನತಿ ಪ್ರಕರಣ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ

ಬೆಳ್ತಂಗಡಿ : ಇತ್ತೀಚೆಗೆ ಬಿಜೆಪಿಯ ಹದಿನೆಂಟು ಮಂದಿ ಶಾಸಕರ ಅಮಾನತಿನೊಂದಿಗೆ ಇದೀಗ ಮತ್ತೊಬ್ಬ ಶಾಸಕ ತನ್ನ ಸ್ಥಾನವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಾರ್ಚ್ ತಿಂಗಳಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ ಖಾದರ್ ರವರು 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದರು. ಆದರೆ ತಮ್ಮ ಪಕ್ಷದ ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂಬ ಹೋರಾಟವನ್ನು ಬಿಜೆಪಿ ಮುಂದುವರೆಸಿದ್ದು, ಈ ಅಮಾನತು ಆದೇಶದ ಮಧ್ಯೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೂಡಾ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಬೆಳ್ತಂಗಡಿ ಶಾಸಕ ಪೂಂಜಾ ಆಡಿದ ಒಂದು ಮಾತು ಅವರ ಶಾಸಕ ಸ್ಥಾನಕ್ಕೆ ಕುತ್ತು ತಂದಿದೆ. ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಧರ್ಮದ ಕುರಿತಾದ ಹೇಳಿಕೆ ನೀಡಿದ್ದಾರೆ. ಯು.ಟಿ ಖಾದರ್ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಹರೀಶ್ ಪೂಂಜಾ ಅವರು ಸ್ಪೀಕರ್ ಮುಸ್ಲಿಂ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇದರಿಂದ ಸಿಡಿದೆದ್ದ ಕಾಂಗ್ರೆಸ್ ಶಾಸಕರು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಿದ್ದು ಹಕ್ಕು ಬಾಧ್ಯತಾ ಸಮಿತಿ ಅಧ್ಯಕ್ಷ ಮಹಾಂತೇಶ ಕೌಜಲಗಿ ಅವರು ಈ ದೂರನ್ನು ಪರಿಶೀಲನೆ ನಡೆಸಲಿದ್ದಾರೆ. ಇದೀಗ ಶಾಸಕ ಹರೀಶ್ ಪೂಂಜಾ ಪ್ರಕರಣದಲ್ಲಿ ಸ್ಪೀಕರ್ ಖಾದರ್ ಏನು ಕ್ರಮ ಕೈಗೊಳ್ಳುತ್ತಾರೆ ಅನ್ನೋದು ಕುತೂಹಲ ಮೂಡಿಸಿದೆ