RSS ನಿರ್ಬಂಧಕ್ಕೆ ಬಿಜೆಪಿ ಸರ್ಕಾರದ ಆದೇಶವೇ ಅಸ್ತ್ರ: ಶಿಕ್ಷಣೇತರ ಚಟುವಟಿಕೆಗೆ ಶಾಲೆ ಬಳಸದಂತೆ ಹಿಂದಿನ ಆದೇಶ; ಬಿಜೆಪಿಗೆ ಕಾಂಗ್ರೆಸ್ ನಾಯಕರ ತಿರುಗೇಟು

ರಾಜ್ಯದಲ್ಲಿ RSS ಕಾರ್ಯಚಟುವಟಿಕೆಗಳ ನಿರ್ಬಂಧಕ್ಕೆ ಮುಂದಾಗಿರುವ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಆದೇಶವನ್ನೇ ಈಗ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. ಶಾಲಾ ಆವರಣ ಅಥವಾ ಮೈದಾನವನ್ನು ಯಾವುದೇ ಕಾರಣಕ್ಕೂ ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ 2023ರಲ್ಲಿ ಅಂದಿನ ಬಿಜೆಪಿ ಸರ್ಕಾರ ತಿಳಿಸಿತ್ತು. ಆ ಆದೇಶವನ್ನ ಬಿಜೆಪಿಗರು ಈಗ ಮರೆತಂತಿದೆ ಎಂದು ಕಾಂಗ್ರೆಸ್ ನಾಯಕರು ತಿವಿದಿದ್ದಾರೆ.

ಇದೇ ವಿಚಾರವನ್ನ ಕಾಂಗ್ರೆಸ್ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಬಿಜೆಪಿ ಹೇಳೋದು ಮಾತ್ರ ಆಚಾರ, ನಡೆದುಕೊಳ್ಳುವುದೆಲ್ಲ ಅನಾಚರವೇ. ಇದು ಬಿಜೆಪಿಯ ಜಾಣ ಕುರುಡಾ? ಇಲ್ಲ ಸರ್ಕಾರದ ಗಮನಕ್ಕೇ ಬಾರದೇ ಇಂತಹ ಆದೇಶಗಳಾಗುವುದು ಕೇಶವ ಕೃಪಾದಲ್ಲಾ? ಎಂದು ವ್ಯಂಗ್ಯವಾಡಿದ್ದಾರೆ. ಸಂವಿಧಾನವನ್ನು ಒಪ್ಪಿಕೊಂಡವರು ಸರ್ಕಾರದ ನೀತಿ, ನಿಯಮಗಳನ್ನು ಪಾಲಿಸಬೇಕಾದ್ದೂ ಮೊದಲ ಕರ್ತವ್ಯ. ಪ್ರಜೆಗಳು ಮಾತ್ರವಲ್ಲ, ಸಂಘ ಸಂಸ್ಥೆಗಳು ಕೂಡ ಕಾನೂನುಗಳನ್ನು ಮೀರಿ ವರ್ತನೆ ಮಾಡುವಂತಿಲ್ಲ. ಆರೆಸ್ಸೆಸ್ ಹಾಗೂ ಸಂಘ ಪರಿವಾರ ಕಾನೂನನ್ನೂ ಮೀರಿದ್ದೇ ಎಂದು ಪ್ರಶ್ನಿಸಿದ್ದಾರೆ.
‘ಗಾಂಧಿ ಕೊಂದಿದ್ದು ಇದೇ ಸಿದ್ಧಾಂತದ ಪ್ರಭಾವಿತರು’
RSSನವರು ತಾವು ಒಳ್ಳೆಯವರು ಎಂದು ತೋರಿಸಿಕೊಳ್ಳುತ್ತಾರೆ. ಹಿಂದೂ ಸಂಸ್ಕೃತಿಯ ಉತ್ಕೃಷ್ಟ ಮೌಲ್ಯಗಳನ್ನ ತೋರಿಸುತ್ತೇವೆ ಅಂತಾರೆ. ಇದು ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಅನ್ನೊ ರೀತಿ ಆಗಿದೆ ಎಂದು ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆ ಸಿದ್ಧಾಂತದಿಂದ ಪ್ರಭಾವಕ್ಕೆ ಒಳಗಾದವರೆ ಗಾಂಧೀಜಿಯನ್ನು ಕೊಂದಿದ್ದು. ರಾಜ್ಯದಲ್ಲಿ ನಾವೇನು ಆ ಸಂಘಟನೆಯನ್ನು ಬ್ಯಾನ್ ಮಾಡಲು ಹೊರಟಿಲ್ಲ. ಬದಲಾಗಿ ಸಾರ್ವಜನಿಕ ಸ್ಥಳ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಅದರ ಕಾರ್ಯಚಟುವಟಿಕೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.