ಶಿಂಧೆ ಶಿವಸೇನೆಗೆ ದ್ರೋಹ ಬಗೆದ ಬಿಜೆಪಿ

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ಅಧಿಕಾರ ಹಿಡಿಯುವ ತವಕದಲ್ಲಿರುವ ಬಿಜೆಪಿ, ತನ್ನದೇ ಮಿತ್ರಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಹತ್ತಿಕ್ಕಲು ಅಚ್ಚರಿಯ ರೀತಿಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಈ ವಿಚಿತ್ರ ಮೈತ್ರಿಯ ಫಲವಾಗಿ ಅಂಬರ್ನಾಥ್ ನಗರಸಭೆಯಲ್ಲಿ ಬಿಜೆಪಿಯ ತೇಜಶ್ರೀ ಕರಂಜುಲೆ ಮೇಯರ್ ಪೀಠವನ್ನು ಏರಿದ್ದಾರೆ.


ಶಿಂಧೆ ಬಣಕ್ಕೆ ಬಹುಮತದ ಕೊರತೆ ಇದ್ದಿದ್ದನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿ, ಕಾಂಗ್ರೆಸ್‌ನ 12 ಹಾಗೂ ಎನ್‌ಸಿಪಿ (ಅಜಿತ್ ಪವಾರ್ ಬಣ) ದ 4 ಸದಸ್ಯರ ಬೆಂಬಲ ಪಡೆದು ಅಧಿಕಾರವನ್ನು ಬಲವಂತವಾಗಿ ಕಸಿದುಕೊಂಡಿದೆ. ಡಿಸೆಂಬರ್ 20 ರಂದು ನಡೆದ ಚುನಾವಣೆಯಲ್ಲಿ 27 ಸ್ಥಾನ ಗೆದ್ದ ಶಿಂಧೆ ಬಣಕ್ಕೆ ಬಿಜೆಪಿ ಬೆಂಬಲ ನೀಡುವ ಬದಲು, ವಿರೋಧ ಪಕ್ಷದೊಂದಿಗೆ ಸೇರಿ ‘ಅಂಬರ್ನಾಥ್ ವಿಕಾಸ್ ಅಘಾಡಿ’ ರಚಿಸಿರುವುದು ರಾಜಕೀಯ ನೈತಿಕತೆಯ ಪ್ರಶ್ನೆ ಎತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಂಧೆ ಬಣದ ಶಾಸಕ ಬಾಲಾಜಿ ಕಿನಿಕರ್, “ಬಿಜೆಪಿ ಮಾಡಿದ್ದು ಅಪ್ಪಟ ವಿಶ್ವಾಸಘಾತಕತನ; ಅಧಿಕಾರಕ್ಕಾಗಿ ಸಿದ್ಧಾಂತವನ್ನೇ ಮರೆತು ನಡೆಸುತ್ತಿರುವ ಈ ಅಪವಿತ್ರ ಮೈತ್ರಿ ಶಿವಸೇನೆಯ ಬೆನ್ನಿಗೆ ಚೂರಿ ಹಾಕಿದಂತೆ,” ಎಂದು ಬಿಜೆಪಿಯ ದ್ವಂದ್ವ ನೀತಿಯನ್ನು ಕಟುವಾಗಿ ಟೀಕಿಸಿದರು.
ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಬೊಬ್ಬೆ ಹೊಡೆಯುವ ಬಿಜೆಪಿ, ತನ್ನದೇ ಮಿತ್ರನಿಗೆ ದ್ರೋಹ ಬಗೆಯಲು ಕಾಂಗ್ರೆಸ್ ಕಾಲಿಗೆ ಬಿದ್ದಿರುವುದು ಇಲ್ಲಿ ಎದ್ದು ಕಾಣುತ್ತಿದೆ.