ದೆಹಲಿಯಲ್ಲಿ ವಿಚಿತ್ರ ಆತ್ಮಹತ್ಯೆ: ಹೀಲಿಯಂ ಅನಿಲ ಸೇವಿಸಿ ಚಾರ್ಟರ್ಡ್ ಅಕೌಂಟೆಂಟ್ ಸಾವು!

ನವದೆಹಲಿ: ದೆಹಲಿಯ ಬರಾಖಂಬಾ ಪೊಲೀಸ್ ಠಾಣೆ ಪ್ರದೇಶದ ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಒಬ್ಬ ಬಾಯಿಗೆ ಹೀಲಿಯಂ ಅನಿಲ ತುಂಬಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಹೀಲಿಯಂ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡ ಮೊದಲ ಪ್ರಕರಣ ಇದಾಗಿದೆ.

ಮೃತನನ್ನು 25 ವರ್ಷದ ಧೀರಜ್ ಕನ್ಸಾಲ್ (Dheeraj Kansal) ಎಂದು ಗುರುತಿಸಲಾಗಿದ್ದು ಗುರುಗ್ರಾಮ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಮೃತರು ಫೇಸ್‌ಬುಕ್‌ನಲ್ಲಿ (Facebook) ಆತ್ಮಹತ್ಯೆ ಪತ್ರವನ್ನು ಪೋಸ್ಟ್ ಮಾಡಿದ್ದಾನೆ. ಅದರಲ್ಲಿ ನನಗೆ, ಸಾವು ಜೀವನದ ಅತ್ಯಂತ ಸುಂದರವಾದ ಭಾಗ. ದಯವಿಟ್ಟು ನನ್ನ ಸಾವಿನ ಬಗ್ಗೆ ದುಃಖಿಸಬೇಡಿ. ಆತ್ಮಹತ್ಯೆ ಮಾಡಿಕೊಳ್ಳುವುದು ಕೆಟ್ಟದ್ದಲ್ಲ. ಏಕೆಂದರೆ ನಾನು ಯಾರಿಗೂ ಜವಾಬ್ದಾರನಲ್ಲ” ಎಂದು ಬರೆಯಲಾಗಿದೆ. ಆತ್ಮಹತ್ಯೆ ಪೋಸ್ಟ್‌ನಲ್ಲಿ ಧೀರಜ್ ತನ್ನ ಸಾವಿಗೆ ಯಾರನ್ನೂ ದೂಷಿಸಿಲ್ಲ. ಸೋಮವಾರ ಬೆಳಿಗ್ಗೆ ಮಂಡಿ ಹೌಸ್ ಬಳಿಯ ಬಜಾರ್ ಲೇನ್‌ನಲ್ಲಿರುವ ತಮ್ಮ ಮನೆಯೊಳಗೆ ಧೀರಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಧೀರಜ್ 3500 ರೂ.ಗೆ ಆನ್‌ಲೈನ್‌ನಲ್ಲಿ ಹೀಲಿಯಂ (Helium) ಗ್ಯಾಸ್ ಸಿಲಿಂಡರ್ ಅನ್ನು ಆರ್ಡರ್ ಮಾಡಿದ್ದನು. ಆತ್ಮಹತ್ಯೆ ಮಾಡಿಕೊಳ್ಳಲು ಹೀಲಿಯಂ ಗ್ಯಾಸ್ ಅನ್ನು ಆರಿಸಿಕೊಂಡಿದ್ದನು. ಧೀರಜ್ ಬಂಗಾಳಿ ಮಾರುಕಟ್ಟೆಯಲ್ಲಿರುವ ಅತಿಥಿ ಗೃಹದಲ್ಲಿ ತನ್ನ ಬಾಯಿಗೆ ಹೀಲಿಯಂ ಅನಿಲ ತುಂಬಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧೀರಜ್ ಮೂಲತಃ ಹರಿಯಾಣದ ಕರ್ನಾಲ್ ನಿವಾಸಿ. ಬರಾಖಂಬಾ ಪೊಲೀಸ್ ಠಾಣೆಯು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಪೊಲೀಸರು ತನಿಖೆಗಾಗಿ ಮೃತ ಧೀರಜ್‌ನ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ಜುಲೈ 28 ರಂದು, ಬಾರಾಖಂಬಾ ಪೊಲೀಸ್ ಠಾಣೆಯ ಪೊಲೀಸರಿಗೆ ಅತಿಥಿ ಗೃಹದಲ್ಲಿ ತಂಗಿದ್ದ ಅತಿಥಿಯೊಬ್ಬರು ತಮ್ಮ ಪಕ್ಕದ ಕೋಣೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಮಾಹಿತಿ ನೀಡಿದ್ದರು. ನಂತರ ಘಟನಾ ಸ್ಥಳಕ್ಕೆ ಪೊಲೀಸರು, ಎಫ್‌ಎಸ್‌ಎಲ್, ಅಗ್ನಿಶಾಮಕ ದಳ ತಂಡ ತಲುಪಿ ಕೋಣೆಯ ಬಾಗಿಲು ಒಡೆದು ಒಳಗೆ ಪ್ರವೇಶಿಸಿತು.
ಧೀರಜ್‌ನ ದೇಹವು ಹಾಸಿಗೆಯ ಮೇಲೆ ಮಕಾಡೆ ಮಲಗಿತ್ತು. ಹೀಲಿಯಂ ಸಿಲಿಂಡರ್‌ಗೆ ಸಂಪರ್ಕ ಹೊಂದಿದ ಪೈಪ್ ಅವನ ಬಾಯಿಗೆ ಜೋಡಿಸಲಾಗಿತ್ತು. ಮುಖದ ಮೇಲೆ ಒಂದು ಮಾಸ್ಕ್ ಇತ್ತು ಮತ್ತು ಅದರ ಮೇಲೆ ಪ್ಲಾಸ್ಟಿಕ್ ಸುತ್ತಿ ಕುತ್ತಿಗೆಯ ಬಳಿ ಟೇಪ್ ಅಂಟಿಸಲಾಗಿತ್ತು. ಹತ್ತಿರದಲ್ಲಿ ಒಂದು ಸಿಲಿಂಡರ್, ಮಾಸ್ಕ್ ಮತ್ತು ಮೀಟರ್ ಅಳವಡಿಸಲಾದ ಸಾಧನ ಪತ್ತೆಯಾಗಿದೆ. ಧೀರಜ್‌ನ ತಂದೆ 2003ರಲ್ಲಿ ನಿಧನರಾಗಿದ್ದು ತಾಯಿ ಮರುಮದುವೆಯಾಗಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಒಡಹುಟ್ಟಿದವರು ಇರಲಿಲ್ಲ.
