ವಿಚಿತ್ರ ಕೊಲೆ: 10 ವರ್ಷಗಳ ಹಿಂದೆ ಬಿಟ್ಟು ಹೋಗಿದ್ದ ಪತಿಯಿಂದಲೇ ಹೆಂಡತಿಯ ಹತ್ಯೆ

ದೆಹಲಿ: ಇತ್ತೀಚೆಗೆ ಗಂಡ ಹೆಂಡತಿಯನ್ನು ಹೆಂಡತಿ ಗಂಡನನ್ನು ಕೊಲೆ ಮಾಡುವ ಪ್ರಕರಣಗಳು ಪ್ರತಿದಿನವೂ ವರದಿಯಾಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ವಿಚಿತ್ರ ಘಟನೆ ನಡೆದಿದೆ. 10 ವರ್ಷಗಳ ಹಿಂದೆ ಹೆಂಡತಿ ಮಕ್ಕಳನ್ನು ಬಿಟ್ಟು ಹೋದ ಪತಿಯೊಬ್ಬ ಸಾಧುವಿನ ವೇಷ ಧರಿಸಿ ಬಂದು ಹೆಂಡತಿಯನ್ನು ಸುತ್ತಿಗೆಯಿಂದ ಹೊಡೆದ ಕೊಲೆ ಮಾಡಿ ಪರಾರಿಯಾದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

10 ವರ್ಷದ ಹಿಂದೆ ತೊರೆದು ಹೋಗಿದ್ದ ಆರೋಪಿ
ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಜೋಡಿ ಬಿಹಾರ ಮೂಲದವರಾಗಿದ್ದಾರೆ. 10 ವರ್ಷದ ಹಿಂದೆ ಪತ್ನಿಯನ್ನು ತೊರೆದು ಹೋಗಿದ್ದ ಆರೋಪಿ ಪ್ರಮೋದ್ ಜಾ ಬಿಹಾರದಲ್ಲಿ ವಾಸ ಮಾಡುತ್ತಿದ್ದ. ಬಿಹಾರದ ಮುಂಗೇರ್‌ನಿಂದ ಆತ ಆಗಸ್ಟ್ 1 ರಂದು ದೆಹಲಿಗೆ ಬಂದಿದ್ದು, ಸಾಧುವಿನ ವೇಷದಲ್ಲಿ ಮನೆಗೆ ಬಂದ ಆತನನ್ನು ಆತನ ಪರಿತ್ಯಕ್ತ ಪತ್ನಿ ಕಿರಣ್ ಜಾ, ಸಾಧು ಎಂದು ಮನೆಗೆ ಸೇರಿಸಿದ್ದಾರೆ. ಆದರೆ ಆತ ಪತ್ನಿಯನ್ನೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ರಾತ್ರಿ 12 ಗಂಟೆಯ ವೇಳೆಗೆ ಈ ಹತ್ಯೆ ನಡೆದಿದ್ದು, ಬೆಳಗಿನ ಜಾವ 4 ಗಂಟೆಗೆ ಪ್ರಕರಣ ಬೆಳಕಿಗೆ ಬಂದಿದೆ. ಅವರ ಸೊಸೆ ಅತ್ತೆ ಕಿರಣ್ ಜಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಜೋರಾಗಿ ಕಿರುಕಿಕೊಂಡಿದ್ದಾರೆ. ಪೊಲೀಸರು ಮುಂಜಾನೆ 4 ಗಂಟೆ ಸುಮಾರಿಗೆ ತಮಗೆ ಈ ಕೊಲೆ ಬಗ್ಗೆ ಮಾಹಿತಿ ಬಂತು ಎಂದು ಹೇಳಿದ್ದಾರೆ.
ಮಕ್ಕಳಿಬ್ಬರೊಂದಿಗೆ ದೆಹಲಿಗೆ ಬಂದು ಹೊಸ ಬದುಕು ಕಟ್ಟಿದ್ದ ಪತ್ನಿ
ಆರೋಗ್ಯ ಸಹಾಯಕಿಯಾಗಿದ್ದ ಕಿರಣ್ ಜಾ ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ದೂರಾಗಿ ವಾಸಿಸುತ್ತಿದ್ದರು. ದೆಹಲಿಯ ನೆಬ್ ಸರಾಯ್‌ನಲ್ಲಿ ಅವರು ತಮ್ಮ ಮಗ ದುರ್ಗೇಶ್ ಸೊಸೆ ಕಮಲ್ ಝಾ ಅವರೊಂದಿಗೆ ವಾಸ ಮಾಡುತ್ತಿದ್ದರು. ಅವರ ಮಗ ದುರ್ಗೇಶ್ ಬಿಹಾರದ ದರ್ಬಾಂಗ್‌ನಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಘಟನೆ ನಡೆಯುವ ವೇಳೆ ಆತ ಮನೆಯಲ್ಲಿ ಇರಲಿಲ್ಲ, ಪ್ರಾಥಮಿಕ ತನಿಖೆಯ ಪ್ರಕಾರ ಅರೋಪಿ 55 ವರ್ಷದ ಪ್ರಮೋದ್ ಜಾಗೆ ಸ್ಥಿರವಾದ ಆದಾಯವಿರಲಿಲ್ಲ, ಆತ ಬಿಹಾರದಲ್ಲಿ ತನ್ನ ಪೂರ್ವಜರ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿದ್ದ. ಆತ ತನ್ನ ಪತ್ನಿಗೆ ಬಿಹಾರಕ್ಕೆ ಬಂದು ಕೆಲಸ ಮಾಡಿ ಹಣ ಸಂಪಾದಿಸುವಂತೆ ಒತ್ತಾಯಿಸುತ್ತಿದ್ದ ಆದರೆ ಕಿರಣ್ ಜಾ ಗಂಡನ ಈ ಮನವಿಯನ್ನು ತಿರಸ್ಕರಿಸಿದ್ದಳು.
ಕಿರಣ್ ಜಾ ಪುತ್ರಿ ರೋಮಾ ಹೇಳುವ ಪ್ರಕಾರ, ಆರೋಪಿ ಪ್ರಮೋದ್ ಜಾ ತನ್ನ ತಾಯಿಗೆ ದೈಹಿಕ ಹಿಂಸೆ ನೀಡುತ್ತಿದ್ದ ಇದೇ ಕಾರಣಕ್ಕೆ ಆಕೆ ತನ್ನ ಪತಿಯಿಂದ ದೂರಾಗಿ ಇಬ್ಬರು ಮಕ್ಕಳನ್ನು ಕರೆದುಕೊಂಡು ದೆಹಲಿಗೆ ಬಂದು ಹೊಸ ಜೀವನ ಆರಂಭಿಸಿದ್ದಳು. ಕೇವಲ ಎರಡು ತಿಂಗಳ ಹಿಂದಷ್ಟೇ ಕುಟುಂಬದ ಕಾರ್ಯಕ್ರಮಕ್ಕಾಗಿ ನಮ್ಮ ಕುಟುಂಬ ಬಿಹಾರಕ್ಕೆ ಭೇಟಿ ನೀಡಿತ್ತು. ಆ ಸಮಯದಲ್ಲಿ ಪ್ರಮೋದ್ ಜಾ ಒಳ್ಳೆಯವನಂತೆ ನಟಿಸಿದ್ದ ಎಂದು ಆತನ ಪುತ್ರಿಯೂ ಆಗಿರುವ ರೋಮಾ ಪೊಲೀಸರಿಗ ನೀಡಿದ ಮಾಹಿತಿಯಲ್ಲಿ ಹೇಳಿದ್ದಾರೆ.
ಮತ್ತೆ ಬಿಹಾರಕ್ಕೆ ಬರಲು ನಿರಾಕರಿಸಿದ ಕಾರಣಕ್ಕೆ ತಾಯಿಯನ್ನು ಆತ ಕೊಲೆ ಮಾಡಿದ್ದಾನೆ ಎಂದು ರೋಮಾ ಹೇಳಿದ್ದಾಳೆ. ಕೊಲೆಗೆ ಬಳಸಿದ ಸುತ್ತಿಗೆ ಮನೆಯೊಳಗೆ ಪತ್ತೆಯಾಗಿದೆ. ಮನೆ ಮುಂದೆ ಇರುವ ಸಿಸಿಟಿವಿಯಲ್ಲಿ ಆರೋಪಿ ಪ್ರಮೋದ್ ಜಾ ರಾತ್ರಿ 12.50ರ ಸುಮಾರಿಗೆ ಆ ಪ್ರದೇಶದಿಂದ ಹೊರಟು ಹೋಗುತ್ತಿರುವುದು ರೆಕಾರ್ಡ್ ಆಗಿದೆ. ಆತನ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ರೈಲ್ವೆ ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳಿಗೆ ಆತನ ಪತ್ತೆಗಾಗಿ ತಂಡಗಳನ್ನು ಕಳುಹಿಸಲಾಗಿದೆ ಎಂದು ದೆಹಲಿ ಡಿಸಿಪಿ ಹೇಳಿದ್ದಾರೆ.
