ಹಾಸನದಲ್ಲಿ ವಿಚಿತ್ರ ಘಟನೆ: ಚಿನ್ನಾಭರಣ ಅಂಗಡಿಯಲ್ಲಿ ಮಗುವನ್ನು ಮರೆತು, ಕಳ್ಳತನವಾಗಿದೆ ಎಂದು ದೂರು ಕೊಟ್ಟ ತಾಯಿ

ಹಾಸನ : ಮಹಾಭಾರತದಲ್ಲಿ ಮದುವೆಯಾಗುವ ಮುನ್ನವೇ ಗರ್ಭವತಿಯಾಗಿದ್ದ ಕುಂತಿ ಸಮಾಜಕ್ಕೆ ಹೆದರಿ ಮಗುವನ್ನು ನದಿಯಲ್ಲಿ ತೇಲಿ ಬಿಟ್ಟಿದ್ದಳು. ಫಾರ್ಸ್ ಫಾರ್ವಡ್ ಮಾಡಿ ಇಂದಿನ ದಿನಕ್ಕೆ ಬಂದರೆ, ಹಾಸನದಲ್ಲಿ ತಾಯಿಯೊಬ್ಬಳು ಚಿನ್ನ ಖರೀದಿಗೆ ಬಂದು ಮಗುವನ್ನೇ ಅಂಗಡಿಯಲ್ಲಿ ಬಿಟ್ಟುಹೋದ ಘಟನೆ ನಡೆದಿದೆ.

ಆಧುನಿಕ ಕುಂತಿಯ ಕಥೆ ಕೇಳಿ ಪೊಲೀಸ್ರೇ ಅಚ್ಚರಿಪಟ್ಟಿದ್ದಾರೆ.
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತಿದ್ದ ತಾಯಿ ಬಳಿಕ ತನ್ನ ಮಗು ನಾಪತ್ತೆಯಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಜ್ಯೂವೆಲ್ಲರಿ ಶಾಪ್‌ನಿಂದ ಹೊರಗೆ ಬಂದು ಅಳುತ್ತಾ ನಿಂತಿದ್ದ ಮಗುವನ್ನು ಮಹಿಳೆಯೊಬ್ಬರು ಸಂತೈಸಿ ಕರೆದೊಯ್ದಿದ್ದರು. ಮಗುವಿನ ಪೋಷಕರು ಯಾರೂ ಕಾಣದ ಹಿನ್ನೆಲೆಯಲ್ಲಿ ಮಹಿಳೆ ಆ ಮಗುವನ್ನು ತನ್ನೊಟ್ಟಿಗೆ ಕರೆದೊಯ್ದಿದ್ದಳು. ಹಾಸನ ನಗರದ ಗಾಂಧಿ ಬಜಾರ್‌ನಲ್ಲಿ ಈ ಘಟನೆ ನಡೆದಿತ್ತು.
ಎರಡೂವರೆ ವರ್ಷದ ಪುತ್ರಿ ಸುಪ್ರಿಯಾ ಜೊತೆ ತಾಯಿ ಉಷಾ ಚಿನ್ನ ಖರೀದಿಗೆ ಬಂದಿದ್ದರು. ಚಿನ್ನ ಖರೀದಿ ಮಾಡಿದ ಬಳಿಕ ಮಗುವನ್ನು ಅಂಗಡಿಯಲ್ಲಿಯೇ ಮರೆತು ಹೋಗಿದ್ದಾರೆ. ಮಗುವನ್ನು ಮರೆತು ಬಂದಿರುವುದು ಮನೆಗೆ ಹೋದ ಬಳಿಕ ಗೊತ್ತಾಗಿದೆ. ಮನೆಗೆ ಹೋದ ಬಳಿಕ ಅವರಿಗೆ ಈ ಬಗ್ಗೆ ಆತಂಕ ಶುರುವಾಗಿತ್ತು.
ಎಷ್ಟೇ ಹುಡುಕಿದರೂ ಮಗಳು ಸಿಗದಿದ್ದಾಗ ಮಗು ಕಳುವಾಗಿದೆ ಎಂದು ಪೊಲೀಸ್ ಠಾಣೆಗೆ ಉಷಾ ದೂರು ನೀಡಿದ್ದರು. ಬಳಿಕ ಮಗುವಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸಿದ್ದರು.
ಇನ್ನೊಂದಡೆ ಮಗುವನ್ನು ತನ್ನೊಂದಿಗೆ ಕರೆದೊಯ್ದಿದ್ದ ಭವಾನಿ, ಸುಪ್ರಿಯಾಗೆ ಊಟ ತಿನ್ನಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರ ಸಮ್ಮುಖದಲ್ಲಿ ಮಗುವನ್ನು ತಾಯಿ ಭವಾನಿಗೆ ಹಸ್ತಾಂತರ ಮಾಡಿದ್ದಾರೆ. ಅದರೊಂದಿಗೆ ಮಗು ಕಾಣೆಯಾಗಿದ್ದ ಪ್ರಕರಣ ಸುಖಾಂತ್ಯವಾಗಿದೆ. ಮಗುವನ್ನು ಭವಾನಿ ಕರೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
