ಬರ್ತ್‌ಡೇ ಹೆಸರಿನಲ್ಲಿ ಹುಚ್ಚಾಟದ ಪರಮಾವಧಿ: ಯುವಕನನ್ನು ಕುರ್ಚಿಗೆ ಕಟ್ಟಿ ಕೇಕ್ ಉಜ್ಜಿ, ನೀರು, ಫೋಮ್ ಎರಚಿ ಅಪಾಯಕಾರಿ ಆಚರಣೆ; ವೀಡಿಯೋ ವೈರಲ್, ತೀವ್ರ ಆಕ್ರೋಶ

ಬರ್ತ್‌ಡೇ ನೆಪದಲ್ಲಿ ಇಂದು ಹುಚ್ಚಾಟಗಳು ಜಾಸ್ತಿ ಆಗ್ತಿವೆ. ಅದರಲ್ಲೂ ವಿಶೇಷವಾಗಿ ಈ ಜನರೇಷನ್‌ನ ಯುವಕರು ಆಚರಿಸುವ ಬರ್ತ್‌ಡೇಗೆ ನೋಡುವುದಕ್ಕೆ ಭಯ ಹುಟ್ಟಿಸುವಂತಿರುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಬರ್ತ್‌ಡೇ ಆಚರಿಸುವ ತರುಣನ ಡೇತ್ ಡೇ ನೂ ಅದೇ ದಿನ ಆದರೂ ಆಗಬಹುದು. ಹಾಗಿರುತ್ತೆ ಈಗಿನ ಕೆಲವು ಯುವಕರು ಮಾಡುವ ಅವತಾರಗಳು. ಇವರು ಸ್ನೇಹಿತರೇ ಅಥವಾ ಸ್ನೇಹಿತರ ಸೋಗಿನಲ್ಲಿರುವ ರಾಕ್ಷಸರೇ ಎಂದು ಒಂದು ಕ್ಷಣ ಯೋಚನೆ ಮಾಡುವಂತಹ ಸಂದರ್ಭಗಳು ಬಂದು ಬಿಡುತ್ತವೆ. ಅದೇ ರೀತಿ ಇಲ್ಲೊಂದು ಬರ್ತ್‌ಡೇ ಸೆಲೆಬ್ರೇಷನ್‌ನ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿದರೆ ಬರ್ತ್‌ಡೇ ಆಚರಿಸಿಕೊಂಡ ಹುಡುಗ ಬದುಕುಳಿದಿರೋದೇ ಹೆಚ್ಚು.

ಯುವಕನ ಬರ್ತ್‌ಡೇಯನ್ನು ಭಯಾನಕವಾಗಿ ಆಚರಿಸಿದ ಸ್ನೇಹಿತರು
ಬಹುತೇಕ ಹರೆಯದ ಯುವಕರಿಗೆ ಮುಂದೇನಾದರೂ ಆದರೆ ಎಂಬ ಸಣ್ಣ ಸೂಕ್ಷ್ಮ ಯೋಚನೆಗಳು ಇರುವುದಿಲ್ಲ, ಒಟ್ಟಿನಲ್ಲಿ ತಾವು ಸಂಭ್ರಮಿಸಬೇಕು ಅಷ್ಟೇ ಹಾಗೆಯೇ ಈ ಹುಡುಗರು ಫ್ರೆಂಡ್‌ಶಿಪ್‌ಗೆ ಬೆಲೆ ಕೊಡುವುದು ಹೆಚ್ಚು. ಕೆಲವರಂತು ಜೀವಕ್ಕೆ ಜೀವ ಕೊಡುವ ಸ್ನೇಹಿತರು ಸ್ನೇಹಕ್ಕಾಗಿ ಏನು ಮಾಡಲು ಸಿದ್ಧರಿರುವ ಸ್ನೇಹಿತರು. ಇನ್ನೂ ಕೆಲವರು ಸ್ನೇಹದ ಕಾರಣಕ್ಕೆ, ಸ್ನೇಹಿತರು ಮತ್ತೆ ಕಾಡಿಸುತ್ತಾರೆ, ಕಾಲೆಳೆಯುತ್ತಾರೆ ಎನ್ನುವ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಳ್ಳುತ್ತಾರೆ. ಇಲ್ಲೂ ಅದೇ ಆಗಿದೆ ನೋಡಿ, ಸ್ನೇಹಿತರ ಗುಂಪಿನಲ್ಲಿ ಓರ್ವನ ಹುಟ್ಟುಹಬ್ಬವನ್ನು ಯುವಕರು ಹೇಗೆ ಆಚರಿಸಿದ್ದಾರೆ ಈ ವೀಡಿಯೋ ನೋಡಿದ್ರೆ ನೀವು ಹರೆಯದ ಮಕ್ಕಳ ಪೋಷಕರಾಗಿದ್ರೆ ಒಂದು ಕ್ಷಣ ನಿಮ್ಮ ಮೈ ಝುಮ್ ಅನಿಸೋದಂತೂ ಪಕ್ಕಾ.
ಈ ವೀಡಿಯೋ ನೋಡಿದ್ರೆ ಮೈ ಝುಂ ಅನ್ನೋದು ಪಕ್ಕಾ?
samudayatv ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಬರ್ತ್‌ಡೇ ಬಾಯ್‌ನ್ನು ಒಂದು ಚೇರ್‌ಗೆ ಕಟ್ಟಿದ್ದಾರೆ. ಬಳಿಕ ಆತನ ಕೈಯಲ್ಲಿ ಪುಟ್ಟದಾದ ಕೇಕೊಂದ ಮೇಲೆ ಮೇಣದ ಬತ್ತಿ ಹೊತ್ತಿಸಿ ಆತನ ಮುಂದೆ ಹಿಡಿದು ಆತ ಅದನ್ನು ಊದಿ ಆರಿಸಿದ್ದಾನೆ. ನಂತರದ ದೃಶ್ಯಗಳು ಮಾತ್ರ ಭಯಾನಕ. ಆ ಕೇಕ್‌ನ್ನು ಆತನ ತಲೆಯನ್ನು ಹಿಡಿದುಕೊಂಡು ಮುಖ ಮೂತಿ ನೋಡದೇ ಉಜ್ಜಿದ್ದಾರೆ. ಇದಾದ ನಂತರ ಓರ್ವ ಒಂದು ಬಕೆಟ್ ನೀರು ಸುರಿದಿದ್ದಾನೆ, ಇನ್ನೊರ್ವ ಒಂದೊಂದೆ ಮೊಟ್ಟೆಯನ್ನು ಆತನ ತಲೆಗೆ ಒಡೆಯುತ್ತಿದ್ದಾನೆ. ಇದಾದ ನಂತರ ಓರ್ವ ಬಿಳಿ ನೊರೆ ಬರುವಂತಹ ಪೋಮ್ ಅನ್ನು ಪೋಮರ್ ಬೀರ್, ಶಾಂಪೆನ್ ಹೀಗೆ ಒಂದಾದ ಮೇಲೊಂದರಂತೆ ಆತನ ಮೇಲ ವಿಶೇಷವಾಗಿ ಆತನ ಮುಖಕ್ಕೆ ಎರಚುತ್ತಿದ್ದು, ಆತನಿಗೆ ಉಸಿರಾಡುವುದಕ್ಕೂ ಬಿಡುವು ನೀಡುವುದಿಲ್ಲ. ಬರೀ ಇಷ್ಟೇ ಅಲ್ಲ ಕೆಲವರು ಆತನ ಖಾಸಗಿ ಭಾಗವನ್ನು ಕೂಡ ಟಚ್ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಸುಮಾರು 8ರಿಂದ 10 ಜನರಿರುವ ಹುಡುಗರು ಏಕಕಾಲಕ್ಕೆ ಹೀಗೆ ಆತನ ಮೇಲೆ ಬರ್ತ್‌ಡೇ ಸೆಲೆಬ್ರೇಷನ್ ಆಚರಣೆಯ ಹೆಸರಲ್ಲಿ ಮುಗಿಬಿದ್ದಿದ್ದು, ಆತ ಉಸಿರಾಡ್ತಿದ್ದಾನೋ ಇಲ್ವೋ ಅನ್ನೋದನ್ನೂ ನೋಡುವುದಕ್ಕೂ ಅಲ್ಲಿ ಜನರಿಲ್ಲ, ಆ ಹುಡುಗರಿಗೆ ಅಂತಹ ಸೂಕ್ಷ್ಮತೆಯೂ ಇಲ್ಲ.
ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ:
ಏನೋ ಈ ಹುಡುಗ ಗಟ್ಟಿ ಜೀವ ಬದುಕಿದ್ದಾನೆ ಉಸಿರಾಟದ ಸಮಸ್ಯೆ ಇರುವವರಿಗೆ ಏನಾದರೂ ಹೀಗೆ ಮಾಡಿದರೆ ಏನು ಗತಿ? ಇಂದಿನ ದಿನಗಳಲ್ಲಿ ಯುವ ಸಮುದಾಯದ ಅನೇಕರು ಕಣ್ಣು ತೆರದು ಬಿಡುವಷ್ಟರಲ್ಲಿ ಹೃದಯಾಘಾತದಂತಹ ದುರಂತಕ್ಕೆ ಉಸಿರು ಚೆಲ್ಲಿರುತ್ತಾರೆ. ಹೀಗಿರುವಾಗ ಬರ್ತ್‌ಡೇ ಹೆಸರಲ್ಲಿ ನಡೆಯುತ್ತಿರುವ ಈ ಭಯಾನಕ ಆಟಗಳು ಯಾರದೋ ಜೀವ ಬಲಿಪಡೆಯದಿರಲಿ ಎಂಬುದಷ್ಟೇ ನಮ್ಮ ಕಳಕಳಿ. ಬರ್ತ್‌ಡೇ ಅಚರಣೆ ಮಾಡಲಿ ಆದರೆ ಯಾರ ಜೀವವನ್ನೋ ಬಲಿ ಕೊಡುವಂತಹ ಈ ರೀತಿಯ ವಿಕೃತ ಆಚರಣೆ ಯಾರು ಮಾಡದಿರಲಿ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಯುವ ತರುಣರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥವರ ವಿರುದ್ದ ಸುಮೋಟೋ ಕೇಸ್ ಹಾಕಬೇಕು, ಸ್ವಲ್ಪ ಹೆಚ್ಚು ಕಡಿಮೆ ಆದರೂ ಜೀವ ಹೋಗುವುದು ಎಂದು ಒಬ್ಬರು ಆಕ್ರೋಶ ಹೊರಹಾಕಿದ್ದಾರೆ. ಆತನ ಉಸಿರು ನಿಂತಿದ್ದರೆ ಇದಕ್ಕೆ ಯಾರು ಹೊಣೆಯಾಗ್ತಿದ್ರು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಇದೊಂದು ಕೊಲೆ ಪ್ರಯತ್ನ ಬರ್ತ್‌ಡೇ ಅಲ್ಲ ಎಂದು ಒಬ್ಬರು ಕಿಡಿಕಾರಿದ್ದಾರೆ.