ಬರ್ತಡೇ ಬಿಲ್ ವಿವಾದ; ಸ್ನೇಹಿತರ ಹಲ್ಲೆಯಿಂದ ಕೋಮಾಕ್ಕೆ ಹೋಗಿದ್ದ ಬರ್ತಡೇ ಬಾಯ್ ಸಾವು, ಇಬ್ಬರ ಬಂಧನ

ಆನೇಕಲ್: ಬರ್ತ್‌ಡೇ ಆಚರಿಸೋಕೆ ಬಂದ ದಿನವೇ ಪಾರ್ಟಿಯ ಬಿಲ್ ಕಟ್ಟುವ ವಿಚಾರಕ್ಕೆ ಗಲಾಟೆ ನಡೆದು, ಅದೇ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಬೆಂಗಳೂರು (Bengaluru) ಹೊರವಲಯ ಜಿಗಣಿ (Jigani) ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡರಪಾಳ್ಯದಲ್ಲಿ ನಡೆದಿದೆ.

ಅ.16ರಂದು ಸಂದೀಪ್‌ನ ಬರ್ತಡೇ ಇತ್ತು. ಆ ದಿನ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಕುಂಬಾರನಹಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಹೋಗಿದ್ದರು. ಅಲ್ಲಿ ಕೇಕ್ ಕಟ್ ಮಾಡಿ, ಬಳಿಕ ಸ್ನೇಹಿತರೆಲ್ಲ ಸೇರಿಕೊಂಡು ಎಣ್ಣೆ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದರು. ಕೊನೆಯಲ್ಲಿ ಬಿಲ್ ಕಟ್ಟುವಾಗ ಸಂದೀಪ್ ನನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದಿದ್ದ. ಆಗ ಸಂದೀಪ್ ಮತ್ತು ಸಂತೋಷ್ ನಡುವೆ ಗಲಾಟೆ ಆಗಿದೆ
ಅಲ್ಲಿದ್ದ ಉಳಿದ ಸ್ನೇಹಿತರು ಜಗಳ ಬಿಡಿಸಿ ಇಬ್ಬರನ್ನು ಕಳುಹಿಸಿದ್ದರು. ಆದರೆ ಮನೆಗೆ ಹೋಗದ ಸಂದೀಪ್ ಅಲ್ಲಿಂದ ಊರಿನ ಬಳಿಯಿರುವ ವಾಲಿಬಾಲ್ ಕೋರ್ಟ್‌ಗೆ ಎಣ್ಣೆ ಹಾಕೋಕೆ ಹೋಗಿದ್ದ. ವಿಚಾರ ತಿಳಿದ ಸಂತೋಷ್ ಮತ್ತು ಸಾಗರ್ ಅಲ್ಲಿಗೆ ಎಂಟ್ರಿ ಕೊಟ್ಟು ಏಕಾಏಕಿ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದರು. ಆಗ ಸಂದೀಪ್ ಅಲ್ಲಿಂದ ಜಿಗಣಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಮನೆಗೆ ಬಂದಿದ್ದ.
ಗಲಾಟೆಯ ಬಳಿಕ ಮನೆಯಲ್ಲಿದ್ದ ಸಂದೀಪ್‌ಗೆ ವಾಂತಿ, ತಲೆನೋವು ಶುರುವಾಗಿದೆ. ತಲೆಯೊಳಗೆ ರಕ್ತ ಹೆಪ್ಪುಗಟ್ಟಿ ಮೆದುಳಿಗೆ ಪೆಟ್ಟು ಬಿದ್ದಿತ್ತು. ಹತ್ತಿರದ ಕ್ಲಿನಿಕ್‌ಗೆ ಹೋಗಿ ಇಂಜೆಕ್ಷನ್ ತೆಗೆದುಕೊಂಡು ಬಂದು ಮನೆಯಲ್ಲಿ ಮಲಗಿದ್ದ. ಮತ್ತೆ ಒಂದು ದಿನದ ಬಳಿಕ ಅದೇ ರೀತಿ ತಲೆನೋವು, ವಾಂತಿ ಶುರುವಾಯ್ತು. ಬಳಿಕ ಖಾಸಗಿ ಆಸ್ಪತ್ರೆಗೆ ಬಂದಿದ್ದ ಸಂದೀಪ್‌ಗೆ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ಕಳುಹಿಸಿದ್ದರು.
ಅಲ್ಲಿನ ವೈದ್ಯರು ಪರೀಕ್ಷೆ ನಡೆಸಿದಾಗ ಸಂದೀಪ್ ತಲೆಗೆ ಗಂಭೀರ ಗಾಯವಾಗಿರೋದು ತಿಳಿದಿದೆ. ಅಲ್ಲಿಂದ ಮಡಿವಾಳದ ಕಾವೇರಿ ಆಸ್ಪತ್ರೆಗೆ ಶಿಫ್ಟ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿತ್ತು. ಸಂಪೂರ್ಣ ಪ್ರಜ್ಞೆ ಕಳೆದುಕೊಂಡು ಕೋಮಾಗೆ ತಲುಪಿದ ಸಂದೀಪ್ ಚಿಕಿತ್ಸೆ ಫಲಕಾರಿಯಾಗದೇ ಅ.28ರಂದು ಸಾವನ್ನಪ್ಪಿದ್ದಾನೆ.
ಮಗನ ಸಾವಿನ ವಿಷಯ ತಿಳಿದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸೂಕ್ತ ತನಿಖೆ ನಡೆಸಿ ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಮೃತ ಸಂದೀಪ್ ತಂದೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಸಂತೋಷ್ ಮತ್ತು ಸಾಗರ್ ಇಬ್ಬರನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ