ಬಿಕ್ಲು ಶಿವ ಕೊ*ಲೆ ತನಿಖೆ: ಆರೋಪಿಗಿತ್ತಾ ನಟ ನಟಿಯರ ನಂಟು?ರಹಸ್ಯ ಬಯಲು

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ (Biklu Shiva) ಕೇಸ್ ತನಿಖೆ ಚುರುಕುಗೊಂಡಿದೆ. ಬಿಜೆಪಿ ಶಾಸಕ ಭೈರತಿ ಬಸವರಾಜ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕೂಡಾ ಪ್ರತಿಭಟನೆ ನಡೆಸಿದೆ. A1 ಜಗದೀಶ್ನನ್ನು (Jagadish) ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಒಂದೊಂದೇ ಸಂಗತಿಗಳನ್ನು ಬಯಲಿಗೆಳೆಯುತ್ತಿದ್ದಾರೆ. ಆರೋಪಿ ಜಗದೀಶ್ ಅಲಿಯಾಸ್ ಮತ್ತು ಜಗ್ಗನ ಮನೆ ಮತ್ತು ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಲೈಸೆನ್ಸ್ ಹೊಂದಿರುವ ಪಿಸ್ತೂಲ್ ಮತ್ತು ಕೆಲ ದಾಖಲೆಗಳನ್ನು ದಾಳಿ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಟಿ ರಚಿತಾರಾಮ್‌ಗೆ ಸೀರೆ, ಒಡವೆ ಗಿಫ್ಟ್ ನೀಡಿದ್ದ ಜಗ್ಗ?
ಬಿಕ್ಲು ಶಿವ ಕೊಲೆ ಕೇಸ್ ಕೆದಕುತ್ತಾ ಹೋದಂತೆ ಸ್ಫೋಟಕ ಸತ್ಯಗಳು ಬಯಲಾಗುತ್ತಿವೆ. ಕೇವಲ ರಾಜಕಾರಣಿಗಳಷ್ಟೇ ಅಲ್ಲ, ಸಿನಿಮಾ ನಟ-ನಟಿಯರ ಜೊತೆಗೂ ಜಗ್ಗನಿಗೆ ನಂಟಿತ್ತು ಎಂಬುದು ಬಯಲಾಗಿದೆ. ನಟಿ ರಚಿತಾರಾಮ್‌ಗೆ ಜಗ್ಗ ಸೀರೆ, ಒಡವೆ ಗಿಫ್ಟ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ಅಷ್ಟೇ ಅಲ್ಲ, ನಟ ಸುದೀಪ್, ರವಿಚಂದ್ರನ್, ಜೈಜಗದೀಶ್ ಜತೆ ತೆಗೆಸಿಕೊಂಡಿದ್ದ ಫೋಟೋಗಳು ಕೂಡ ಹರಿದಾಡುತ್ತಿವೆ.
ರಚಿತಾರಾಮ್ ಆಪ್ತ ಮೂಲಗಳಿಂದ ಸ್ಪಷ್ಟನೆ
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ರಚಿತರಾಮ್ ಆಪ್ತ ಮೂಲಗಳು, ಇದು ರವಿ ಬೋಪಣ್ಣ ಚಿತ್ರದ ಸಂದರ್ಭದ ಫೋಟೋ. ರವಿ ಬೋಪಣ್ಣ ತಂಡ ಗಿಫ್ಟ್ ಕೊಟ್ಟಿದ್ದು, ಚಿತ್ರದ ಸಹ ನಿರ್ಮಾಪಕನಾಗಿದ್ದ ಜಗದೀಶ್ ಅಲಿಯಾಸ್ ಜಗ್ಗ ನೀಡಿರುವ ಗಿಫ್ಟ್ ಅಲ್ಲ ಎಂದು ತಿಳಿಸಿದೆ.
ಬಿಕ್ಲು ಹತ್ಯೆಗೆ ಹುಡುಗರನ್ನು ಸಿದ್ಧಗೊಳಿಸಿದ್ದ ಆರೋಪಿ ಕಿರಣ್
ಬಿಕ್ಲು ಶಿವ ಹತ್ಯೆಯ ತನಿಖೆ ಚುರುಕುಗೊಂಡಿದೆ. ವಿಚಾರಣೆ ವೇಳೆ, ರೋಚಕ ಸಂಗತಿ ಬಯಲಾಗಿದೆ. ಆರೋಪಿ ಕಿರಣ್, ಬಿಕ್ಲು ಹತ್ಯೆಗೆ ಹುಡುಗರನ್ನು ಸಿದ್ಧಗೊಳಿಸಿದ್ದ. ಕನ್ನಡದ ಸ್ಥಳೀಯ ಹುಡುಗರು ಬೇಡ ಎಂದು ಮತ್ತೊಬ್ಬ ಆರೋಪಿ ಪ್ಯಾಟ್ರಿಕ್‌ಗೆ ಹೇಳಿದ್ದ. ಹೀಗಾಗಿ ಪ್ಯಾಟ್ರಿಕ್ ತಮಿಳು ಹುಡುಗರನ್ನು ವ್ಯವಸ್ಥೆ ಮಾಡಿದ್ದ. ಪ್ಯಾಟ್ರಿಕ್ ಹೇಳಿದಂತೆ ಬಿಕ್ಲು ಶಿವನನ್ನ ಪ್ಯಾಟ್ರಿಕ್ ಹಾಗೂ ಸಹಚರರು ಭೀಕರವಾಗಿ ಹತ್ಯೆ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಗಿದೆ.
ಈಮಧ್ಯೆ, ಕಿರಣ್ ಹೈಕೋರ್ಟ್ ಮೆಟ್ಟಿಲೇರಿದ್ದು, ಪೊಲೀಸ್ ಕಸ್ಟಡಿಯಲ್ಲಿ ಹಲ್ಲೆ, ಕಿರುಕುಳ ಮಾಡುತ್ತಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದಾನೆ. ಆರೋಪಿಯನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಂತೆ ಹೈಕೋರ್ಟ್ ಸೂಚಿಸಿದೆ.
ಕೊಲೆ ಕೇಸ್ ಸಂಬಂಧ ಅರುಣ್ ನವೀನ್ ಎಂಬುವವರನ್ನೂ ಬಂಧಿಸಲಾಗಿದೆ. ಪ್ಯಾಟ್ರಿಕ್ ಹೇಳಿದಂತೆ ಮಚ್ಚು ಬೀಸಿ ಹೊಡೆದಿದ್ದಾಗಿ ಇಬ್ಬರು ಬಾಯ್ಬಿಟ್ಟಿದ್ದಾರೆ. ಕೊಲೆ ಪ್ರಕರಣ ಸಂಬಂಧ ಜಗ್ಗ ಸೇರಿ ಹಲವರಿಗೆ ಖಾಕಿ ಶೋಧ ನಡೆಸ್ತಿದೆ. ಭೈರತಿ ಬಸವರಾಜ್ ಸಹೋದರನ ಮಗ ಅನಿಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
