ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಭೈರತಿ ಬಸವರಾಜ್‌ಗೆ ಮಧ್ಯಂತರ ರಿಲೀಫ್

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್‌ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಶಾಸಕ ಭೈರತಿ ಬಸವರಾಜ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾ. ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದೆ. ಪ್ರಕರಣದ ತನಿಖೆಗೆ ಸಹಕರಿಸಲು ಭೈರತಿ ಬಸವರಾಜ್‌ಗೆ ಸೂಚನೆ ನೀಡಿದೆ. ಪ್ರಕರಣ ರದ್ದು ಕೋರಿ ಶಾಸಕ ಭೈರತಿ ಬಸವರಾಜ್ ಅರ್ಜಿ ಸಲ್ಲಿಸಿದ್ದರು. ಭೈರತಿ ಬಸವರಾಜ್ ಈವರೆಗೆ ವಿಚಾರಣೆಗೆ ಸಹಕರಿಸಿದ್ದಾರೆಂದು ಭೈರತಿ ಬಸವರಾಜ್ ಪರ ವಕೀಲರು ವಾದಿಸಿದರು.

ಕಳೆದ ತಿಂಗಳು ಜುಲೈ 15 ರಂದು ನಡೆದ ಬಿಕ್ಲು ಶಿವ ಕೊಲೆಗೆ ಭೈರತಿ ಸುರೇಶ್ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾರತಿನಗರ ಪೊಲೀಸರು ಕೊಲೆ ಪ್ರಕರಣ ಸಂಬಂಧ ಜಗದೀಶ್, ವಿಮಲ್, ಕಿರಣ್, ಅನಿಲ್ ಸೇರಿದಂತೆ ಶಾಸಕ ಭೈರತಿ ಬಸವರಾಜ್ ವಿರುದ್ಧವೂ ಎಫ್ಐಆರ್ ದಾಖಲಿಸಿದ್ದಾರೆ.
ನಡೆದಿದ್ದು ಏನು?
ಜುಲೈ 15ರ ರಾತ್ರಿ 8.30 ಸುಮಾರಿಗೆ ಬಿಕ್ಲು ಶಿವ ತನ್ನ ಮನೆಯಿಂದ ಹೊರಗಡೆ ಬಂದು ಪುಟ್ ಪಾತ್ ಮೇಲೆ ನಿಂತಿದ್ದ. ಈ ವೇಳೆ ಮನೆ ಸಮೀಪವೇ ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7ರಿಂದ8 ಆರೋಪಿಗಳು ಬಿಕ್ಲು ಶಿವನ ಮೇಲೆ ದಾಳಿ ಮಾಡಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಬಿಕ್ಲು ಶಿವನನ್ನು ಕವರ್ ಮಾಡಿ ಹಲ್ಲೆ ಮಾಡಿದ್ದಾರೆ. ಕೊನೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳ ಮಧ್ಯೆ ಸಿಲುಕಿಸಿ ಮನಸೋ ಇಚ್ಛೆ ಮಾರಾಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಹಲವು ಸಂಗತಿಗಳು ಬೆಳಕಿಗೆ ಬಂದಿದ್ದವು. ಬಿಕ್ಲು ಶಿವ ಕೊಲೆಯಾಗಲು ಪ್ರಮುಖ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದರು. ಕೊಲೆಗೆ ಸುಪಾರಿ ಪಡೆದಿದ್ದ ಗ್ಯಾಂಗ್ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಜುಲೈ 24 ರಂದು ಆದೇಶ ಹೊರಡಿಸಿತ್ತು.
