ಡಿಕ್ಕಿಯ ರಭಸಕ್ಕೆ ಬಸ್ ಅಡಿಗೆ ಸಿಲುಕಿದ ಬೈಕ್: ಘರ್ಷಣೆಯಿಂದ ಕಿಡಿ ಹಾರಿ ಬೆಂಕಿ

ಬಳ್ಳಾರಿ: ಹೈದರಾಬದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಹೊತ್ತಿ ಉರಿದಿದ್ದು, 20 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಬಸ್‌ನಲ್ಲಿ ಒಟ್ಟು 40ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕರ್ನೂಲು ಹೊರವಲಯದಲ್ಲಿ ಚಿನ್ನಟಕೂರು ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಬೈಕ್ ಮತ್ತು ಬಸ್ ಮಧ್ಯೆ ಡಿಕ್ಕಿ
ತಡರಾತ್ರಿ ಚಿನ್ನಟಕೂರು ಎಂಬಲ್ಲಿ ಬೈಕ್ ಮತ್ತು ಬಸ್ ಮಧ್ಯೆ ಡಿಕ್ಕಿಯಾಗಿದೆ. ಡಿಕ್ಕಿಯಾದ ಬೈಕ್, ಬಸ್ ಕೆಳಗಡೆ ಸಿಲುಕಿದೆ. ಸುಮಾರು 300 ಮೀಟರ್ ದೂರದವರೆಗೆ ಬೈಕ್ ಎಳೆದೊಯ್ದ ಪರಿಣಾಮ ಬಸ್‌ನ ಡೀಸೆಲ್ ಟ್ಯಾಂಕ್‌ಗೆ ಹಾನಿಯಾಗಿ ಬೆಂಕಿ ಹತ್ತಿಕೊಂಡಿದೆ.
ಕಿಟಕಿ ಮೂಲಕ ಹೊರ ಬಂದ ಕೆಲ ಪ್ರಯಾಣಿಕರು
ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಚಾಲಕ ತಿಳಿದಿದ್ದ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಗಾಢ ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಎಚ್ಚರಗೊಳಿಸಲು ಚಾಲಕರಿಬ್ಬರು ಪ್ರಯತ್ನಿಸಿದ್ದಾರೆ. ಕೆಲ ಪ್ರಯಾಣಿಕರು ಕಿಟಕಿ ಮೂಲಕ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಹಾಗೆಯೇ ಚಾಲಕರಿಬ್ಬರು ಪ್ರಾಣ ಉಳಿಸಿಕೊಂಡಿದ್ದಾರೆ.
11 ಶವ
ಶೇ.90ರಷ್ಟು ಬಸ್ ಸುಟ್ಟುಕರಕಲಾಗಿದ್ದು, ಸದ್ಯ 11 ಶವಗಳನ್ನು ಹೊರ ತೆಗೆಯಲಾಗಿದೆ. ಸದ್ಯ ಇಬ್ಬರು ಚಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಾಳು ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ
ಸಿಎಂ ಸಂತಾಪ
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಬಸ್ ಬೆಂಕಿ ಅಪಘಾತದ ಸುದ್ದಿ ಕೇಳಿ ಶಾಕ್ ಆಯ್ತು. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ತಕ್ಷಣ ಪರಿಹಾರ ಮತ್ತು ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.