ಬೆಂಗಳೂರಿನಲ್ಲಿ ದಂಪತಿಗೆ ಮಾರಕಾಸ್ತ್ರ ತೋರಿಸಿ ಬೈಕ್ ಸವಾರನ ಧಮ್ಕಿ!

ಬೆಂಗಳೂರು: ನಗರದಲ್ಲಿ ಮತ್ತೆ ರೋಡ್ ರೇಜ್ ಪ್ರಕರಣ ಮುಂದುವರಿದಿದೆ. ನಡು ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಗಲಾಟೆ ಮಾಡಿ ದಂಪತಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾಡುಗೋಡಿ ಪೊಲೀಸರು ಬೈಕ್ ಸವಾರನಿಗಾಗಿ ಶೋಧ ನಡೆಸಿದ್ದಾರೆ.
ಶುಕ್ರವಾರ ಸಂಜೆ 6

ಗಂಟೆಯ ಸುಮಾರಿಗೆ ದಂಪತಿ ಕಾರಿನಲ್ಲಿ ಹೋಗುವಾಗ ಯಾವುದೋ ಕಾರಣಕ್ಕೆ ಬೈಕ್ ಸವಾರನೊಂದಿಗೆ ಜಗಳ ಮಾಡಿಕೊಂಡಿದ್ದಾರೆ. ನಂತರ ಅಪಾರ್ಟ್‌ಮೆಂಟ್ ವೊಂದರ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ್ದಾಗ ಬೈಕ್ ನಿಲ್ಲಿಸಿ ಬಂದ ಸವಾರ ನಡುರಸ್ತೆಯಲ್ಲಿಯೇ ದಂಪತಿ ಜತೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಆಕ್ರೋಶಗೊಂಡ ಸವಾರ ಮಾರಕಾಸ್ತ್ರವನ್ನು ತೋರಿಸಿ, ನಿಮ್ಮನ್ನು ಇಲ್ಲಿಯೇ ಮುಗಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾನೆ. ಬೈಕ್ ಸವಾರನ ಹುಚ್ಚಾಟ ಕಾರಿನಲ್ಲಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.