ಹೊಸಪೇಟೆ ಗಲ್ಲಿಯಲ್ಲಿ ಯುವಕರ ನಡುವೆ ತಲ್ವಾರ್ ಸಹಿತ ಮಾರಾಮಾರಿ

ಬಾಗಲಕೋಟೆ: ಬೈಕ್ ಸೈಡ್ ಹಾಕುವ ವಿಚಾರಕ್ಕೆ ಎರಡು ಗುಂಪುಗಳ ಯುವಕರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಇಳಕಲ್ ಹೊಸಪೇಟೆ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ದಾದಾಪೀರ್ ಜಕ್ಕಲಿ, ಮಹಮ್ಮದ್ ಜಕ್ಕಲಿ ಹಾಗೂ ಸ್ನೇಹಿತರ ಗುಂಪು, ಶಾಮೀದ್ ರೇಶ್ಮಿ, ರಂಜಾನ್ ಬನ್ನು ಮಧ್ಯೆ ಬೈಕ್ ಸೈಡ್ ಹಾಕುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಎರಡು ಗುಂಪಿನ ಯುವಕರು ದೊಣ್ಣೆ, ಹಾಕಿ ಸ್ಟಿಕ್ ಹಾಗೂ ಮಾರಾಕಾಸ್ತ್ರಗಳನ್ನು ಬಳಸಿ ಗಲಾಟೆ ಶುರು ಮಾಡಿದ್ದಾರೆ.

ಹೊಡೆದಾಟ ಜೋರಾಗುತ್ತಿದ್ದಂತೆ ಯುವಕನೊಬ್ಬ ತಲ್ವಾರ್ ಬಳಸಿ ಜಗಳಕ್ಕೆ ಇಳಿದಿದ್ದ. ಈ ಗಲಾಟೆಯ ಭಯಾನಕ ವಿಡಿಯೋ ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ರಸ್ತೆಗೆ ಅಡ್ಡಲಾಗಿ ನಿಂತ ವಾಹನವನ್ನು ಸೈಡಿಗೆ ಹಾಕುವ ವಿಚಾರವಾಗಿ ಶುರುವಾದ ಈ ಜಗಳ ನಂತರ ಮಾರಣಾಂತಿಕ ಹಲ್ಲೆಯವರೆಗೆ ತಿರುಗಿದೆ. ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದು ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರಕರಣದ ಕುರಿತು ಇಳಕಲ್ ನಗರದ ಶಹರ್ ಪೊಲೀಸರು ಎರಡೂ ಗುಂಪಿನ ಹಿರಿಯರನ್ನ ಕರೆದು ದೂರು ದಾಖಲಿಸುವಂತೆ ಸೂಚಿಸಿದ್ದರು. ಎರಡೂ ಗುಂಪಿನ ಹಿರಿಯರು ದೂರು ನೀಡಲು ಹಿಂದೇಟು ಹಾಕಿದ್ದರಿಂದ ಪೊಲೀಸರೇ ಸ್ವಯಂಪ್ರೇರಿತ ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.