ಬಿಹಾರ ಮೂಲದ ಕಾರ್ಮಿಕನಿಂದ ಆಸ್ಪತ್ರೆಯ ಸ್ವಾಗತಕಾರಿಣಿ ಮೇಲೆ ಹಲ್ಲೆ: ವಿಡಿಯೋ ವೈರಲ್

ಠಾಣೆ: ಇಲ್ಲಿನ ಖಾಸಗಿ ಮಕ್ಕಳ ಆಸ್ಪತ್ರೆಯೊಂದರಲ್ಲಿ ಪೂರ್ವಾನುಮತಿ ಇಲ್ಲದೆ ವೈದ್ಯರ ಕೊಠಡಿಗೆ ತೆರಳುತ್ತಿದ್ದ ವೇಳೆ ತಡೆದ ಸ್ವಾಗತಕಾರಿಣಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಠಾಣೆ: ಲಂಚ ಪಡೆಯುತ್ತಿದ್ದಾಗ ಸಿಕ್ಕಿ ಬಿದ್ದ ಪೊಲೀಸ್, ಬಂಧನಠಾಣೆಯ ಕಲ್ಯಾಣ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಬಿಹಾರ ಮೂಲದ ವಲಸೆ ಕಾರ್ಮಿಕ, ಸ್ವಾಗತಕಾರಿಣಿ ಮೇಲೆ ಹಲ್ಲೆ ನಡೆಸಿ, ಆಕೆಯ ತಲೆಗೂದಲು ಹಿಡಿದುಕೊಂಡು ಆಸ್ಪತ್ರೆಯ ನೆಲದ ಮೇಲೆ ಎಳೆದುಕೊಂಡು ಹೋಗುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.ಆಕೆಯನ್ನು ಸ್ಥಳದಲ್ಲಿದ್ದ ರೋಗಿಗಳ ಕುಟುಂಬಸ್ಥರು ರಕ್ಷಿಸಿದ್ದಾರೆ.25 ವರ್ಷದ ಗೋಕುಲ್ ಝಾ ಎಂಬಾತ ಈ ಕೃತ್ಯ ಎಸಗಿದ್ದು, ಮಗುವನ್ನು ಹಿಡಿದುಕೊಂಡು ಆತನೊಂದಿಗೆ ಬಂದಿದ್ದ ಮಹಿಳೆಯನ್ನು ಸರತಿ ತಪ್ಪಿಸಿ ವೈದ್ಯರನ್ನು ಭೇಟಿಯಾಗಲು ಯತ್ನಿಸಿದ್ದಾನೆ. ಈ ವೇಳೆ ವೈದ್ಯರು ಬೇರೆ ರೋಗಿಗಳ ಶುಶ್ರೂಷೆಯಲ್ಲಿದ್ದುದ್ದರಿಂದ ಗೋಕುಲ್‌ನನ್ನು ಸ್ವಾಗತಕಾರಣಿ ತಡೆದಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.ಸಂತ್ರಸ್ತೆಗೆ ಗಂಭೀರ ಗಾಯಗಳಾಗಿದ್ದು, ಡೊಂಬಿವಿಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂತ್ರಸ್ತೆ ನೀಡಿದ ದೂರಿನ ಅನ್ವಯ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಯನ್ನು ಮಂಗಳವಾರ ಸಂಜೆ ಬಂಧಿಸಲಾಗಿದೆ.’ಯಾವುದೇ ಸನ್ನಿವೇಶ ಇದ್ದರೂ ಸರಿಯೇ, ಇಂತಹ ಹಿಂಸೆಯನ್ನು ಸಹಿಸುವುದಿಲ್ಲ. ನಮ್ಮ ತಂಡ ಛಲಬಿಡದೇ ಪ್ರಯತ್ನಿಸಿ ಆರೋಪಿ ಗೋಕುಲ್ ಝಾನನ್ನು ಕಲ್ಯಾಣ್‌ನಲ್ಲಿ ಬಂಧಿಸಿದೆ. ಬುಧವಾರ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು’ ಎಂದು ಪೊಲೀಸ್ ಉಪ ಆಯುಕ್ತ ಅತುಲ್ ಜೆಂಡೆ ವರದಿಗಾರರೊಂದಿಗೆ ತಿಳಿಸಿದ್ದಾರೆ.ಸಾರ್ವಜನಿಕರು ನೀಡಿದ ಮಾಹಿತಿ ಹಾಗೂ ಗುಪ್ತಚರ ಇಲಾಖೆಯ ಶ್ರಮದಿಂದಾಗಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಆತನಿಗೆ ಕ್ರಿಮಿನಲ್ ಹಿನ್ನೆಲೆ ಇದ್ದು, ವಿಟ್ಟಲ್‌ವಾಡಿ ಹಾಗೂ ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿತ್ತು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ’ ಎಂದು ಜೆಂಡೆ ತಿಳಿಸಿದ್ದಾರೆ.ಘಟನೆ ನಡೆಯುವಾಗ ಸ್ಥಳದಲ್ಲಿದ್ದ ಝಾನ ಸಹೋದರ ಹಾಗೂ ಇಬ್ಬರು ಮಹಿಳೆಯರನ್ನೂ ವಶಕ್ಕೆ ಪಡೆಯಲಾಗಿದೆ.ಕೃತ್ಯದಲ್ಲಿ ಅವರ ಭಾಗೀದಾರಿಕೆಯನ್ನು ತನಿಖೆ ನಡೆಸಲಾಗುವುದು. ಆಸ್ಪತ್ರೆ ಹಾಗೂ ಸುತ್ತ ಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಕೃತ್ಯದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವುದನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ತನಿಖೆ ಪ್ರಗತಿಯಲ್ಲಿದ್ದು, ಎಲ್ಲಾ ಆಯಾಮಗಳಲ್ಲೂ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಈ ಕೃತ್ಯಕ್ಕೆ ಎಲ್ಲಾ ಪಕ್ಷಗಳ ನಾಯಕರಿಂದ ಖಂಡನೆ ವ್ಯಕ್ತವಾಗಿದೆ.

