ಬಿಹಾರ ಚುನಾವಣೆ: ಸಂಕ್ರಾಂತಿಗೆ ಮಹಿಳೆಯರಿಗೆ ವಾರ್ಷಿಕ ₹30 ಸಾವಿರ ಆರ್ಥಿಕ ನೆರವು; ತೇಜಸ್ವಿ ಯಾದವ್‌ನಿಂದ ಬಂಪರ್ ಘೋಷಣೆ

ಪಾಟ್ನಾ: ಬಿಹಾರದಲ್ಲಿ ಆರ್‌ಜೆಡಿ ಅಧಿಕಾರಕ್ಕೆ ಬಂದ್ರೆ ಸಂಕ್ರಾಂತಿ (Makar Sankranti) ಹಬ್ಬದಂದು ಮಹಿಳೆಯರಿಗೆ 30 ಸಾವಿರ ರೂ. ಆರ್ಥಿಕ ನೆರವು ನೀಡುವುದಾಗಿ ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ (Tejashwi Yadav) ಘೋಷಣೆ ಮಾಡಿದ್ದಾರೆ.

ಬಿಹಾರದಲ್ಲಿ ಮೊದಲ ಹಂತದ ಚುನಾವಣೆಗೆ (Bihar Elections 2025) ಇನ್ನೆರಡು ದಿನಗಳಷ್ಟೇ ಬಾಕಿಯಿದ್ದು, ಮಹಾಘಟಬಂಧನ್ ಹಾಗೂ ಎನ್‌ಡಿಎ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಎರಡೂ ಕಡೆಯಿಂದ ಸಾರ್ವಜನಿಕರಿಗೆ ಬಂಪರ್ ಆಫರ್‌ಗಳು ಬರುತ್ತಿವೆ. ಮೊದಲ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಅದಕ್ಕೂ ಮುನ್ನವೇ ತೇಜಸ್ವಿ ಯಾದವ್ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬಿಹಾರದಲ್ಲಿ (Bihar) ಸರ್ಕಾರ ರಚಿಸಿದ ತಕ್ಷಣ ನಮ್ಮ ಪಕ್ಷ ʻಮಾಯಿ ಬಹಿನ್ ಮಾನ್ʼ ಯೋಜನೆ ಆರಂಭಿಸಲಿದೆ. ಈ ಯೋಜನೆಯಡಿ ಮಹಿಳೆಯರಿಗೆ ವಾರ್ಷಿಕ 30,000 ರೂ. ಆರ್ಥಿಕ ನೆರವು ನೀಡಲಿದೆ. ಅಧಿಕಾರಕ್ಕೆ ಬಂದ್ರೆ ಜ.14ರಂದು ಜಾರಿಗೆ ತರಲಿದ್ದು, ಅಂದೇ ಪೂರ್ಣ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.
ಇದರೊಂದಿಗೆ ಈಗಾಗಲೇ ಘೋಷಿಸಿರುವಂತೆ ರಾಜ್ಯದ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆಯನ್ನ ಜಾರಿಗೊಳಿಸಲಾಗುತ್ತದೆ. ಪೊಲೀಸ್ ಸೇರಿದಂತೆ ಎಲ್ಲಾ ಸರ್ಕಾರಿ ನೌಕರರನ್ನ ತಮ್ಮ ತಮ್ಮ ತವರು ಜಿಲ್ಲೆಗಳಿಂದ 70 ಕಿಮೀ ಅಂತರದಲ್ಲೇ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗಿಂತ ಕ್ವಿಂಟಾಲ್‌ಗೆ 300 ರೂ. ಹಾಗೂ ಗೋಧಿಗೆ 400 ರೂ. ಬೋನಸ್ ನೀಡಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ.
ಇಂಡಿಯಾ ಒಕ್ಕೂಟ ಗೆದ್ದರೆ, ಪಿಎಸಿಎಸ್ ಮುಖ್ಯಸ್ಥರು, ವ್ಯಾಪರ್ ಮಂಡಲಕ್ಕೆ ಜನಪ್ರತಿನಿಧಿಗಳ ಸ್ಥಾನಮಾನ ನೀಡಲಾಗುವುದು ಎಂದು ಅವರು ಹೇಳಿದರು. ಇದಲ್ಲದೆ, ನಾವು ಸರ್ಕಾರ ರಚಿಸಿದರೆ, ರಾಜ್ಯದ 8,400 ನೋಂದಾಯಿತ ವ್ಯಾಪಾರ ಮಂಡಲಗಳು ಮತ್ತು ಪಿಎಸಿಎಸ್‌ಗಳ ವ್ಯವಸ್ಥಾಪಕರಿಗೆ ಗೌರವಧನ ನೀಡಲು ಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ಮುಂದುವರಿದು ಮಾತನಾಡಿ, ಈಗಾಗಲೇ ಆರ್‌ಜೆಡಿ ಮಹಿಳೆಯರಿಗೆ ಪ್ರತಿ ತಿಂಗಳೂ 2,500 ರೂ. ನೀಡುವುದಾಗಿ ಗ್ಯಾರಂಟಿ ಘೋಷಣೆ ಮಾಡಿದೆ. ಇದರ ಹೊರತಾಗಿಯೂ ವಾರ್ಷಿಕ 30,000 ರೂ. ನೀಡುವುದಾಗಿ ಘೋಷಿಸಿದ್ದಾರೆ.