ಬಿಹಾರ ಚುನಾವಣೆ: ಎನ್‌ಡಿಎಯ ಡಿಬಿಟಿ ಬ್ರಹ್ಮಾಸ್ತ್ರ

ಪಾಟ್ನಾ: ಮುಂಬರುವ ಬಿಹಾರ ವಿಧಾನಸಭೆ ಚುನಾವಣಯಲ್ಲಿ ಎನ್‌ಡಿಎ ನೇತೃತ್ವದ ಮೈತ್ರಿಕೂಟವು, ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎನ್ನುವ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ತಲಾ 10 ಸಾವಿರ ನಗದು ವರ್ಗಾವಣೆ ಮಾಡುವ ಮೂಲಕ ಮಹಿಳೆಯರ ಮನಗೆಲ್ಲಲು ಮುಂದಾಗಿದ್ದಾರೆ. ಈ ಡಿಬಿಟಿ ಅಂದರೆ ನೇರ ಹಣ ವರ್ಗಾವಣೆ ಬ್ರಹ್ಮಾಸ್ತ್ರವು ಬಿಹಾರ ಚುನಾವಣೆಯ ದಿಕ್ಕನ್ನೇ ಬದಲಿಸಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದರು. ಈ ವೇಳೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಸೇರಿದಂತೆ ರಾಜ್ಯದ ಹಲವು ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖ್ಯ ಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯು ಸ್ವಯಂ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಬಿಹಾರದಲ್ಲಿ ಆರ್‌ಜೆಡಿ ಅಧಿಕಾರದಲ್ಲಿದ್ದಾಗ, ಅವ್ಯವಸ್ಥೆ ಮತ್ತು ಭ್ರಷ್ಟಾಚಾರದಿಂದಾಗಿ ಮಹಿಳೆಯರು ಅಪಾರವಾಗಿ ಬಳಲುತ್ತಿದ್ದರು. ರಸ್ತೆಗಳು ಹಾಳಾಗಿ ಶಿಥಿಲಗೊಂಡಿದ್ದವು, ಯಾವುದೇ ಸೇತುವೆಯೂ ಇರಲಿಲ್ಲ. ಪ್ರವಾಹಗಳು ತುಂಬಾ ತೊಂದರೆ ಉಂಟುಮಾಡಿದ್ದವು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವರಿಗೆ ಸಕಾಲಿಕ ಚಿಕಿತ್ಸೆ ಸಿಗುತ್ತಿರಲಿಲ್ಲ. ಈ ಪರಿಸ್ಥಿತಿಗಳಿಂದ ನಿಮ್ಮನ್ನು ಹೊರತರಲು ನಮ್ಮ ಸರ್ಕಾರ ಹಗಲಿರುಳು ಶ್ರಮಿಸಿತು ಎಂದು ಪ್ರಧಾನಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ, ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಪಕ್ಷಗಳು ಚುನಾವಣೆಗಳನ್ನು ಗೆಲ್ಲಲು ಸಹಾಯ ಮಾಡುವಲ್ಲಿ ಡಿಬಿಟಿ ಯೋಜನೆಗಳು ಪ್ರಮುಖ ಪಾತ್ರ ವಹಿಸಿವೆ.ಹರಿಯಾಣದಲ್ಲಿ, ಲಾಡೋ ಲಕ್ಷ್ಮಿ ಯೋಜನೆಯು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ, ಆದರೆ ದೆಹಲಿಯ ಮಹಿಳಾ ಸಮೃದ್ಧಿ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗೆ ಆರ್ಥಿಕ ಬೆಂಬಲವನ್ನು ನೀಡುತ್ತದೆ.
ಜಾರ್ಖಂಡ್‌ನ ಮೈಯಾ ಸಮ್ಮಾನ್ ಯೋಜನೆಯು ತಾಯಂದಿರಿಗೆ ಆರೋಗ್ಯ ಮತ್ತು ಕಲ್ಯಾಣ ಅಗತ್ಯಗಳಿಗಾಗಿ ಸಹಾಯವನ್ನು ನೀಡುತ್ತದೆ ಮತ್ತು ಮಧ್ಯಪ್ರದೇಶದ ಲಾಡ್ಲಿ ಬೆಹ್ನಾ ಯೋಜನೆಯು ಮನೆಯ ಬೆಂಬಲಕ್ಕಾಗಿ ಅರ್ಹ ಮಹಿಳೆಯರಿಗೆ ಮಾಸಿಕ ನಗದು ವರ್ಗಾವಣೆಯನ್ನು ಖಚಿತಪಡಿಸುತ್ತದೆ.
ಮಹಾರಾಷ್ಟ್ರದ ಲಡ್ಕಿ ಬಹಿನ್ ಯೋಜನೆಯು ನೇರ ಆರ್ಥಿಕ ನೆರವಿನ ಮೂಲಕ ಹುಡುಗಿಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದ್ದರೆ, ಪಶ್ಚಿಮ ಬಂಗಾಳದ ಲಕ್ಷ್ಮಿರ್ ಭಂಡಾರ್ ಯೋಜನೆಯು ಎಲ್ಲಾ ಅರ್ಹ ಮನೆಗಳ ಮಹಿಳೆಯರಿಗೆ ಮೂಲ ಆದಾಯ ಬೆಂಬಲವನ್ನು ನೀಡುತ್ತದೆ. ಛತ್ತೀಸ್‌ಗಢದ ಮಹಾತಾರಿ ವಂದನಾ ಯೋಜನೆಯು ಮಹಿಳೆಯರಿಗೆ ಅವರ ಆರ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸಲು ಭತ್ಯೆಗಳನ್ನು ಒದಗಿಸುತ್ತದೆ.
ರೇಖಾ ಗುಪ್ತಾ ನೇತೃತ್ವದ ದೆಹಲಿ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗಗಳ ಮಹಿಳೆಯರಿಗೆ 2,500 ರೂ.ಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಮಹಿಳಾ ಸಮೃದ್ಧಿ ಯೋಜನೆಯನ್ನು ಸಹ ಅನುಮೋದಿಸಿತ್ತು. ಆದರೆ ವಿರೋಧ ಪಕ್ಷದ ನಾಯಕರು ರಾಜ್ಯದ ಮತದಾರರಿಗೆ ಸರ್ಕಾರ ಕೊಡುತ್ತಿರುವ ಲಂಚ ಎಂದು ಕರೆದಿದೆ. ಆದರೆ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ ಕೂಡ ಕಾಂಗ್ರೆಸ್ ಚುನಾವಣೆಗಳನ್ನು ಗೆಲ್ಲಲು ಇಂಥದ್ದೇ ಕಲ್ಯಾಣ ಯೋಜನೆಗಳನ್ನು ಬಳಿಸಿಕೊಂಡಿದೆ.
ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ, ಬಿಹಾರದ ಎನ್‌ಡಿಎ ಸರ್ಕಾರದ ಉಪಕ್ರಮವಾಗಿದ್ದು, ಸ್ವಯಂ ಉದ್ಯೋಗ ಮತ್ತು ಜೀವನೋಪಾಯದ ಅವಕಾಶಗಳ ಮೂಲಕ ಮಹಿಳಾ ಸಬಲೀಕರಣ ಉತ್ತೇಜಿಸುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಆರಂಭವಾಗಿದ್ದು ಇಲ್ಲಿಯವರೆಗೆ, 75 ಲಕ್ಷ ಮಹಿಳೆಯರು ಈ ಯೋಜನೆಗೆ ಸೇರಿದ್ದಾರೆ. ಈ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆ ಗಳಿಗೆ 10 ಸಾವಿರ ರೂ.ಗಳನ್ನು ವರ್ಗಾಯಿಸಲಾಗಿದೆ. ಇದು ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಲಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತನಾಡಿ, ಬಿಹಾರದಲ್ಲಿ ಮಹಿಳೆಯ ಕಲ್ಯಾಣಕ್ಕೆ ಹಲವು ಯೋಜನೆ ಜಾರಿ ಮಾಡಲಾಗಿದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಈ ಯೋಜನೆಯಡಿಯಲ್ಲಿ, ಪ್ರತಿ ಕುಟುಂಬ ದಿಂದ ಒಬ್ಬ ಮಹಿಳೆಗೆ ಈ ಯೋಜನೆಯಡಿ ಆಯ್ಕೆ ಮಾಡಲಾಗುತ್ತದೆ. ಅವರ ಕುಟುಂಬದ ಜೀವನೋಪಾಯ ಚಟುವಟಿಕೆಗಳಿಗಾಗಿ, ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದಿದ್ದಾರೆ.
ಪ್ರತಿಯೊಬ್ಬ ಫಲಾನುಭವಿಗೆ ನೇರ ಲಾಭ ವರ್ಗಾವಣೆಯ ಮೂಲಕ ಆರಂಭಿಕವಾಗಿ 10 ಸಾವಿರ ರೂ. ನೆರವು ಪಡೆಯಲಿದ್ದು ನಂತರದ ಹಂತಗಳಲ್ಲಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ನೆರವು ದೊರೆಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
