ಇದು ಅತಿದೊಡ್ಡ ಸೈಬರ್ ಅಟ್ಯಾಕ್: ಆಪಲ್, ಗೂಗಲ್, ಫೇಸ್‌ಬುಕ್ ಸೇರಿದಂತೆ ಪ್ರಮುಖ ಸಂಸ್ಥೆಗಳ ಪಾಸ್‌ವರ್ಡ್‌ಗಳು ಹ್ಯಾಕ್ – ತಜ್ಞರಿಂದ ಎಚ್ಚರಿಕೆ

ಆಯಪಲ್, ಫೇಸ್‌ಬುಕ್, ಗೂಗಲ್ ಸೇರಿದಂತೆ ತಂತ್ರಜ್ಞಾನ ವಲಯದ 16 ಶತಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವ ಅಂಶ ಇದೀಗ ದೃಢಪಟ್ಟಿದೆ. ಇದು ಇದುವರೆಗಿನ ಅತಿದೊಡ್ಡ ಸೋರಿಕೆ ಎನಿಸಿದೆ. ಒಟ್ಟು 184 ದಶಲಕ್ಷ ಪಾಸ್ವರ್ಡ್ ಮಾಹಿತಿಗಳು ಸೋರಿಕೆಯಾಗಿರುವ ಬಗ್ಗೆ ಮೇ 23ರಂದು ವರದಿ ಪ್ರಟಕವಾಗಿತ್ತು.

ಈ ಬಗ್ಗೆ ಸಂಶೋಧನೆ ಮುಂದುವರಿಸಿದಾಗ ಬಹುದೊಡ್ಡ ಪ್ರಮಾಣದ ಮಾಹಿತಿ ಸೋರಿಕೆ ದೃಢಪಟ್ಟಿದೆ.
ತಂತ್ರಜ್ಞಾನ ಕೇಂದ್ರಿತ ಜಗತ್ತಿನಲ್ಲಿ ಪಾಸ್‌ವರ್ಡ್ ಸೋರಿಕೆಯು ನಮ್ಮ ಇಡೀ ಖಾತೆಯ ಮಾಹಿತಿಗಳ ಸೋರಿಕೆಗೆ ಕಾರಣವಾಗುತ್ತದೆ. ಆದ್ದರಿಂದಲೇ ಗೂಗಲ್ ತನ್ನ ಕೋಟ್ಯಂತರ ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಪಾಸ್‌ವರ್ಡ್‌ಳನ್ನಾಗಿ ಬದಲಿಸಿಕೊಳ್ಳುವಂತೆ ಸೂಚನೆ ನೀಡಿದೆ. ಅಂತೆಯೇ ಎಸ್‌ಎಂಎಸ್ ಸಂದೇಶಗಳಲ್ಲಿ ಬಂದ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಫೇಸ್‌ಬುಕ್ ಎಚ್ಚರಿಕೆ ನೀಡಿದೆ. ಹೀಗೆ ಕಳ್ಳತನವಾದ ಪಾಸ್‌ವರ್ಡ್‌ಗಳು ಡಾರ್ಕ್‌ವೆಬ್‌ಗಳಲ್ಲಿ ಅಗ್ಗದ ದರಕ್ಕೆ ಮಾರಾಟಕ್ಕೆ ಲಭ್ಯವಿರುವುದು ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸುಮಾರು ಲಕ್ಷಾಂತರ ಪಾಸ್‌ವರ್ಡ್‌ಗಳಿಂದ ಹಿಡಿದು 3.5 ಶತಕೋಟಿ ಪಾಸ್‌ವರ್ಡ್‌ಗಳವರೆಗೆ ಹೊಂದಿರುವ 30 ಮಾಹಿತಿ ಸೆಟ್ ಗಳು ಪತ್ತೆಯಾಗಿವೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿರುವ ವಿಲಿಯುಸ್ ಪೆಟ್ಕಾಸ್ಕಸ್ ಸಂಸ್ಥೆ ಹೇಳಿದೆ. ಒಟ್ಟು ಸುಮಾರು 16 ಶತಕೋಟಿಗಿಂತ ಹೆಚ್ಚು ಪಾಸ್‌ವರ್ಡ್‌ಗಳು ಸೋರಿಕೆಯಾಗಿವೆ ಎನ್ನುವುದು ಸಂಸ್ಥೆಯ ಹೇಳಿಕೆ. ಇದರಲ್ಲಿ ಎಲ್ಲ ಪ್ರಮುಖ ಟೆಕ್ ಸಂಸ್ಥೆಗಳ ಸಾಮಾಜಿಕ ಜಾಲತಾಣ, ವಿಪಿಎನ್, ಡೆವಲಪರ್ ಪೋರ್ಟೆಲ್ ಗಳ ಪಾಸ್‌ವರ್ಡ್‌ಗಳು ಸೇರಿವೆ. ಆಯಪಲ್, ಫೇಸ್‌ಬುಕ್, ಗೂಗಲ್, ಗಿಟ್‌ಹಬ್, ಟೆಲಿಗ್ರಾಂ ಮತ್ತು ವಿವಿಧ ಸರ್ಕಾರಿ ಸೇವೆಗಳ ಪಾಸ್‌ವರ್ಡ್‌ಗಳು ಸೋರಿಕೆ ಪಟ್ಟಿಯಲ್ಲಿವೆ.
ಈ ಹಿನ್ನೆಲೆಯಲ್ಲಿ ಬಳಕೆದಾರರು ಪ್ರಬಲವಾದ ಪಾಸ್‌ವರ್ಡ್‌ಗಳು ನಿರ್ವಹಿಸುವುದು ಅಗತ್ಯ ಎಂದು ಭದ್ರತಾ ತಜ್ಞರು ಸಲಹೆ ಮಾಡುತ್ತಾರೆ, ಸೈಬರ್ ಭದ್ರತೆ ಎನ್ನುವುದು ಸಂಘಟಿತ ಹೊಣೆಗಾರಿಕೆ; ಸಂಸ್ಥೆಗಳು ಬಳಕೆದಾರರ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿಡುವ ಹೊಣೆ ಹೊಂದಿವೆ. ಆದರೆ ಬಳಕೆದಾರರು ಕೂಡಾ ಯಾವುದೇ ಕಾರಣಕ್ಕೆ ತಮ್ಮ ಪಾಸ್‌ವರ್ಡ್‌ಗಳನ್ನು ಬೇರೆಯವರ ಜತೆ ಹಂಚಿಕೊಳ್ಳಬಾರದು ಎಂದು ಸೈಬರ್ ಭದ್ರತಾ ತಜ್ಞ ಜಾವೇದ್ ಮಲಿಕ್ ಹೇಳುತ್ತಾರೆ.
