ಈ ವರ್ಷ ಜಾಗತಿಕ ಇತಿಹಾಸದಲ್ಲೇ ಅತಿದೊಡ್ಡ ‘ಬಿಗ್ ಕ್ರ್ಯಾಷ್’: ಚಿನ್ನ, ಬೆಳ್ಳಿ, ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡಿ ಎಂದ ರಾಬರ್ಟ್ ಕಿಯೋಸಾಕಿ

ನವದೆಹಲಿ: ಜಾಗತಿಕ ಇತಿಹಾಸದಲ್ಲೇ ಈ ಮೊದಲು ಕಂಡು ಕೇಳರಿಯದಷ್ಟು ಅತಿದೊಡ್ಡ ಮಾರುಕಟ್ಟೆ ಕುಸಿತ ಸಂಭವಿಸುತ್ತದೆ ಎಂದು ಹಲವಾರು ವರ್ಷಗಳಿಂದ ರಾಬರ್ಟ್ ಕಿಯೋಸಾಕಿ ನುಡಿಯುತ್ತಾ ಬಂದಿರುವ ಭಯಾನಕ ಭವಿಷ್ಯ ಈ ವರ್ಷ ಸಂಭವಿಸುತ್ತದಾ? ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಎನ್ನುವ ಜನಪ್ರಿಯ ಪುಸ್ತಕದ ಕರ್ತೃವಾದ ರಾಬರ್ಟ್ ಕಿಯೋಸಾಕಿ (Robert Kiyosaki) ಪದೇ ಪದೇ ತಮ್ಮ ಭವಿಷ್ಯವಾಣಿಯನ್ನು ಹೇಳುತ್ತಲೇ ಇದ್ದಾರೆ. ಇತ್ತೀಚೆಗೆ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ. ಅವರು ಭವಿಷ್ಯ ನುಡಿದಂತೆ ಭಾರೀ ಮಾರುಕಟ್ಟೆ ಕುಸಿತವು ಈ ವರ್ಷವೇ ಸಂಭವಿಸುತ್ತದಂತೆ.

78 ವರ್ಷದ ರಾಬರ್ಟ್ ಕಿಯೋಸಾಕಿ ತಮ್ಮ ಎಕ್ಸ್ ಅಕೌಂಟ್ನಿಂದ ಇತ್ತೀಚೆಗೆ ಈ ಸಂಬಂಧ ಒಂದು ಪೋಸ್ಟ್ ಹಾಕಿದ್ದಾರೆ. ಬೇಬಿ ಬೂಮರ್ಗಳ ರಿಟೈರ್ಮೆಂಟ್ ದುಡ್ಡೆಲ್ಲಾ ಖಾಲಿಯಾಗಲಿದೆ ಎಂದು ಎಚ್ಚರಿಸಿರುವ ಅವರು, ಚಿನ್ನ, ಬೆಳ್ಳಿ ಇತ್ಯಾದಿ ನೈಜ ಆಸ್ತಿಗಳ ಮೇಲೆ ಹೂಡಿಕೆ ಮಾಡುವಂತೆ ತಮ್ಮ ಸಲಹೆಯನ್ನು ಪುನರುಚ್ಚರಿಸಿದ್ದಾರೆ.
ಇಲ್ಲಿ ಬೇಬಿ ಬೂಮರ್ಗಳೆಂದರೆ 1946ರಿಂದ 1964ರ ಅವಧಿಯಲ್ಲಿ ಜನಿಸಿದವರು. ಈಗ ಇವರದ್ದು ನಿವೃತ್ತಿ ಜೀವನ. ಕರೆನ್ಸಿ ರೂಪದಲ್ಲಿ ಇವರು ಸೇವಿಂಗ್ಸ್ ಹಣ ಇಟ್ಟುಕೊಂಡಿರುವುದು, ಈ ಹಣದ ಮೌಲ್ಯ ಬಹಳ ಕಡಿಮೆ ಆಗಬಹುದು ಎಂಬುದು ಕಿಯೋಸಾಕಿ ಅವರ ಅನಿಸಿಕೆ. ಸೇವರ್ಸ್ ಆರ್ ಲೂಸರ್ಸ್ ಎಂದು ಅವರು ಬಹಳ ಕಾಲದಿಂದ ಹೇಳುತ್ತಲೇ ಬಂದಿದ್ದಾರೆ. ತಮ್ಮ ಎಕ್ಸ್ ಪೋಸ್ಟ್ನಲ್ಲಿ ಅದನ್ನು ಉಲ್ಲೇಖಿಸಿದ್ದಾರೆ.
ಚಿನ್ನ, ಬೆಳ್ಳಿ, ಬಿಟ್ಕಾಯಿನ್ಗಳಂತಹ ನೈಜ ಆಸ್ತಿಯಲ್ಲಿ ಹೂಡಿಕೆ
‘ಮುದ್ರಿತ ಆಸ್ತಿಗಳನ್ನು (ಕರೆನ್ಸಿ ನೋಟು) ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಲೇ ಬಂದಿದ್ದೇನೆ. ರಿಯಲ್ ಎಸ್ಟೇಟ್ಗಳಲ್ಲಿ ಹೂಡಿಕೆ ಮಾಡಿ… ಚಿನ್ನ, ಬೆಳ್ಳಿ, ಬಿಟ್ಕಾಯಿನ್ ಮತ್ತು ಇತ್ತೀಚೆಗೆ ಎಥಿರಿಯಮ್ ಇವುಗಳ ಮೇಲೆ ಹೂಡಿಕೆ ಮಾಡಿ ಎಂದು ವರ್ಷಗಳಿಂದ ಹೇಳುತ್ತಲೇ ಇದ್ದೇನೆ’ ಎಂದು ರಿಚ್ ಡ್ಯಾಡ್ ಪೂರ್ ಡ್ಯಾಡ್ ಲೇಖಕರು ವಿವರಿಸಿದ್ದಾರೆ.
ರಾಬರ್ಟ್ ಕಿಯೋಸಾಕಿ ಅವರ ಎಕ್ಸ್ ಪೋಸ್ಟ್
ಬೆಳ್ಳಿ ಮತ್ತು ಎಥಿರಿಯಮ್ ಅತ್ಯುತ್ತಮ ಎಂಬುದು ನನ್ನ ಭಾವನೆ. ಇವುಗಳಿಗೆ ಸಂಗ್ರಹ ಮೌಲ್ಯ ಇದೆ. ಅದಕ್ಕಿಂತ ಹೆಚ್ಚಾಗಿ ಬೆಲೆಗಳು ಕಡಿಮೆ ಇವೆ, ಉದ್ಯಮಗಳಲ್ಲಿ ಬಳಕೆ ಆಗುತ್ತವೆ. ಇವುಗಳ ಬೆಂಬಲಿಗರು ಮತ್ತು ವಿರೋಧಿಗಳಿಂದ ಪರ ಮತ್ತು ವಿರೋಧ ಅಭಿಪ್ರಾಯಗಳನ್ನು ಕೇಳಿ ನಿಮ್ಮ ವಿವೇಚನೆ ಬಳಸಿ ಹೂಡಿಕೆ ಮಾಡಿರಿ. ಹೀಗೆ ಹಣಕಾಸು ಚಾಕಚಕ್ಯತೆಯಿಂದ ಮೌಲ್ಯಮಾಪನ ಮಾಡಿ ಶ್ರೀಮಂತರಾಗಲು ಸಾಧ್ಯ ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ರಾಬರ್ಟ್ ಕಿಯೋಸಾಕಿ ಸಲಹೆ ನೀಡಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ