ಪುಣೆ ಡೆಲಿವರಿ ಬಾಯ್ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನ ಮೇಲೆ ಸುಳ್ಳು ಆರೋಪ ಹೊರಿಸಿದ ಯುವತಿ!

ಪುಣೆ: ಪುಣೆಯಲ್ಲಿ ಡೆಲಿವರಿ ಬಾಯ್ನಿಂದ ಅತ್ಯಾಚಾರ ಕೇಸ್ಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅಸಲಿಗೆ ದೂರು ಕೊಟ್ಟ ಮಹಿಳೆ ಕೋಪದಿಂದ ತನ್ನ ಸ್ನೇಹಿತನ ಮೇಲೆಯೇ ಅತ್ಯಾಚಾರ ಆರೋಪ ಹೊರಿಸಿದ್ದಾಗಿ ತಿಳಿದು ಬಂದಿದೆ.

ಹೌದು, ನಗರದ ಐಷಾರಾಮಿ ಸೊಸೈಟಿಯೊಂದರಲ್ಲಿ ಇರುವ ತನ್ನ ನಿವಾಸದಲ್ಲಿ ಕೊರಿಯರದ ಡೆಲಿವರಿ ಬಾಯ್ ಸೋಗಿನಲ್ಲಿ ಬಂದ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಈ ಹಿಂದೆ ಹೇಳಿಕೊಂಡಿದ್ದಳು.
ಆದರೆ ಬಳಿಕ ಕೋಪದಿಂದ ತನ್ನ ಸ್ನೇಹಿತ ವಿರುದ್ಧವೇ ದೂರು ನೀಡಿದ್ದಾಗಿ ಬಾಯ್ಬಿಟ್ಟಿದ್ದಾಳೆ.
ವರದಿಗಳ ಪ್ರಕಾರ ಇಬ್ಬರೂ ಪರಸ್ಪರ ಒಂದೆರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಆತ ಕೆಲವು ಪಾರ್ಸೆಲ್ಗಳನ್ನು ಯುವತಿಗೆ ತಂದು ಕೊಡುತ್ತಿದ್ದ. ಯುವತಿಯ ಕುಟುಂಬ ಹೊರಗೆ ಹೋದಾಗ ಆತ ಮನೆಗೆ ಬರುತ್ತಿದ್ದ. ಈ ಹಿಂದೆಯೂ ಆತ ಹಲವು ಬಾರಿ ಮನೆಯಲ್ಲಿ ಭೇಟಿಯಾಗಿದ್ದರು. ಬುಧವಾರವೂ ಭೇಟಿಯಾಗಲು ನಿರ್ಧರಿಸಿದ್ದರು.

ಯುವತಿ ದೂರಿನಲ್ಲಿ ಮೊದಲು ಆ ದಿನ ತಾನು ಲೈಂಗಿಕ ಸಂಭೋಗಕ್ಕೆ ಸಿದ್ಧಳಿರಲಿಲ್ಲ. ಆದರೆ ಆ ವ್ಯಕ್ತಿ ತನ್ನಮೇಲೆ ಬಲವಂತದಿಂದ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಳು. ಆದರೆ ತನಿಖೆಯ ನಿಗೂಢತೆ ಆಳಕ್ಕೆ ಕೊಂಡೊಯ್ಯುತ್ತಿದ್ದಂತೆ ಯುವತಿ ತಾನು ಆರಂಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾಗಿ ಹೇಳಿದ್ದಾಳೆ.
ಆತ ಸಂಜೆ ತನ್ನ ನಿವಾಸಕ್ಕೆ ಬಂದು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಮುಂದಾಗಿದ್ದ. ಆದರಿಂದ ನಾನು ಕೋಪದಿಂದ ಅತ್ಯಾಚಾರ ನಡೆದಿದ್ದಾಗಿ ಪೊಲೀಸರಿಗೆ ತಿಳಿಸಿದೆ ಎಂದಿದ್ದಾಳೆ. ಮಾತ್ರವಲ್ಲದೇ ಆರೋಪಿ ತನ್ನ ಫೋನ್ನಲ್ಲಿ ನನ್ನ ಬೆನ್ನು ಕಾಣಿಸುವಂತೆ ಸೆಲ್ಫಿ ಫೋಟೋ ತೆಗೆದುಕೊಂಡು ನನಗೆ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಿದ್ದಳು. ಅಸಲಿಗೆ ಆ ಸೆಲ್ಫಿ ತೆಗೆದಿದ್ದು ಮಹಿಳೆಯೇ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಯುವತಿ ಅತ್ಯಾಚಾರ ಆರೋಪ ಏಕೆ ಮಾಡಿದಳು ಎಂದು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಆಕೆಯ ಮಾನಸಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
