ಮುಕಳೆಪ್ಪನ ಮದುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿವಾಹ ನೋಂದಣಾಧಿಕಾರಿ ಕಚೇರಿಗೆ ಬೀಗ, ಸಿಬ್ಬಂದಿ ನಾಪತ್ತೆ!

ಕಾರವಾರ: ಯೂಟ್ಯೂಬರ್ ಮುಕಳೆಪ್ಪ (Mukaleppa) ಸುಳ್ಳು ದಾಖಲೆ ಸೃಷ್ಟಸಿ ಹಿಂದೂ ಯುವತಿಯನ್ನು ಮದುವೆ ಆಗಿದ್ದಾರೆ ಎಂಬ ಆರೋಪ ಹಾಗೂ ಪ್ರಕರಣ ಇದೀಗ ಸರ್ಕಾರಿ ಅಧಿಕಾರಿಗಳಿಗೇ ಕುತ್ತು ತಂದಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡದ (Mundagod) ವಿವಾಹ ನೊಂದಣಾಧಿಕಾರಿ ಕಚೇರಿಗೇ ಬೀಗ ಹಾಕುವಂತೆ ಆಗಿದೆ. ಅಷ್ಟೇ ಅಲ್ಲ, ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ. ಸುಳ್ಳು ದಾಖಲೆ ನೀಡಿ ಮದುವೆಯಾಗಿರುವುದು ಬಯಲಾಗಿದ್ದು, ಮದುವೆ ಮಾಡಿಕೊಂಡಿರುವ ಕಚೇರಿ ಸಿಬ್ಬಂದಿಯ ವಿರುದ್ಧವೂ ದೂರು ದಾಖಲಾದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಮುಕಳೆಪ್ಪ ಹಾಗೂ ಯುವತಿ ಮನೆಯ ಬಾಡಿಗೆ ನೊಂದಣಿ ದಾಖಲಾದ ದಿನವೇ, ಅಂದರೆ, ಜೂನ್ 3 ರಂದೇ ವಿವಾಹ ಆಗಿದ್ದಾರೆ. ನೊಂದಣಾಧಿಕಾರಿ ಹೇಮಾ ನೊಂದಣಿ ನಿಯಮದ ಪ್ರಕಾರ ಕ್ರಮ ಕೈಗೊಳ್ಳದೇ ವಿವಾಹ ನೊಂದಣಿ ಮಾಡಿಕೊಟ್ಟಿದ್ದರು. ಇನ್ನು ಸೆಪ್ಟಂಬರ್ 22 ರಂದು ಶ್ರೀರಾಮ ಸೇನೆ ಕಾರ್ಯಕರ್ತರ ಜೊತೆ ಬಂದ ಗಾಯಿತ್ರಿ ತಾಯಿ ಶಿವಕ್ಕ, ನೊಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಹೇಮಾರವರನ್ನು ತರಾಟೆ ತೆಗೆದುಕೊಂಡಿದ್ದರು. ಇದಲ್ಲದೇ ಮುಂಡಗೋಡು ಠಾಣೆಯಲ್ಲಿ ವಿವಾಹ ನೊಂದಣಾಧಿಕಾರಿ ಹೇಮಾ ಸೇರಿ ಒಟ್ಟು ಏಳು ಜನರ ವಿರುದ್ಧ ಪ್ರಕರಣ ಸಹ ದಾಖಲಿಸಿದ್ದರು.
ನೋಂದಣಾಧಿಕಾರಿ ಕಚೇರಿಗೆ ಬೀಗ: ಸಾರ್ವಜನಿಕರ ಪರದಾಟ
ಪ್ರಕರಣ ದಾಖಲಾದ ನಂತರ ಬುಧವಾರ ನೊಂದಣಾಧಿಕಾರಿ ಹಾಗೂ ಸಿಬ್ಬಂದಿ ಕಚೇರಿಗೆ ಆಗಮಿಸದೇ ಕಚೇರಿಗೆ ಬೀಗ ಹಾಕಿದ್ದಾರೆ. ಕಚೇರಿ ಸಮಯದಲ್ಲಿ ಹಲವು ಜನ ತಮ್ಮ ಕೆಲಸಕ್ಕೆ ಬಂದವರು ಬೀಗ ಹಾಕಿದ ಕಚೇರಿ ನೋಡಿ ಮರಳುವಂತಾದರೆ ,ಕಚೇರಿ ಸಮಯದಲ್ಲಿ ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿಯೇ ಇಲ್ಲದೇ ಹೀಗೆ ಬೀಗ ಹಾಕಿರುವ ಕುರಿತು ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ನೊಂದಣಿ ಕಚೇರಿಯಲ್ಲಿ ಅಧಿಕಾರಿ ಸೇರಿ ಒಟ್ಟು ನಾಲ್ಕು ಜನ ಸಿಬ್ಬಂದಿ ಇದ್ದಾರೆ. ಒಂದುವೇಳೆ, ಬೇರೆ ಕೆಲಸಗಳಿದ್ದರೆ ಉಳಿದ ಸಿಬ್ಬಂದಿ ಆದರೂ ಇರಬೇಕು. ಆದರೇ ಇಡೀ ಕಚೇರಿಗೆ ಬೀಗ ಜಡಿದು ಎಲ್ಲಿಗೆ ಹೋದರು ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಕಚೇರಿ ಬೀಗ ಹಾಕಿರುವುದರ ವಿರುದ್ಧ ಸ್ಥಳೀಯ ಜನರು ತಹಶಿಲ್ದಾರ್ಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ, ನೊಂದಣಾಧಿಕಾರಿ ಹೇಮಾಗೆ ಆರೋಗ್ಯ ಸರಿ ಇಲ್ಲ ಎಂಬ ಸಬೂಬು ಹೇಳಲಾಗಿದೆ. ಆದರೆ ಉಳಿದ ಸಿಬ್ಬಂದಿ ಎಲ್ಲಿ ಹೋಗಿದ್ದಾರೆ ಎಂಬ ಪ್ರಶ್ನೆಗೆ ತಹಶಿಲ್ದಾರ್ ಕೂಡ ಮೌನ ವಹಿಸಿದ್ದಾರೆ.
ಇದೇ ಕಚೇರಿಗೆ ಇಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಹ ಬೇಟಿ ನೀಡಿ ಮುಕಳೆಪ್ಪ ವಿವಾಹ ಸಂಬಂಧ ದಾಖಲೆ ಪರಿಶೀಲನೆ ಮಾಡಲಿದ್ದು, ಪ್ರತಿಭಟನೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ವಿವಾಹ ನೊಂದಣಿ ಮಾಡಿದ ಅಧಿಕಾರಿ ಹೇಮಾ ರವರಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ? ರಿಜಿಸ್ಟರ್ ಗೆ ಹೇಳಿದ ಸುಳ್ಳು ಏನು?
ಏತನ್ಮಧ್ಯೆ, ಯೂಟ್ಯೂಬರ್ ಮುಕಳೆಪ್ಪ ಹಾಗೂ ಗಾಯಿತ್ರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ‘ಲವ್ ಜಿಹಾದ್ ಎಲ್ಲಾ ಸುಳ್ಳು, ನಾವು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದೇವೆ, ನಮ್ಮನ್ನು ಬದುಕಲು ಬಿಡಿ’ ಎಂದು ಮನವಿ ಮಾಡಿದ್ದಾರೆ. ಆದರೆ, ಇತ್ತ ಯುವತಿ ತಾಯಿ ಶಿವಕ್ಕ ಹಾಗೂ ಶ್ರೀರಾಮ ಸೇನೆಯವರು ಪ್ರಕರಣವನ್ನು ಸುಲಭದಲ್ಲಿ ಕೈಬಿಡುವಂತೆ ಕಾಣಿಸುತ್ತಿಲ್ಲ.
