ಬೆಳಗಾವಿ ಸಹಕಾರಿ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ಗೆ ಲಕ್ಷ್ಮಣ ಸವದಿ ಬಿಗ್ ಶಾಕ್: ಕೃಷ್ಣಾ ಸಕ್ಕರೆ ಕಾರ್ಖಾನೆ ಕ್ಲೀನ್ ಸ್ವೀಪ್!

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದ ಜಾರಕಿಹೊಳಿ ಬ್ರದರ್ಸ್ಗೆ ಲಕ್ಷ್ಮಣ ಸವದಿ ಬಿಗ್ ಶಾಕ್ ಕೊಟ್ಟಿದ್ದಾರೆ. ಹೌದು.. ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಚಿಕ್ಕೋಡಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಪ್ಯಾನೆಲ್ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಕತ್ತಿ ಕುಟುಂಬ ಹಾಗೂ ಅಥಣಿ ಮತ್ತು ಚಿಕ್ಕೋಡಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಸಹೋದರರು ಜಾರಕಿಹೊಳಿ ಬ್ರದರ್ಸ್ ಮುಂದೆ ತಮ್ಮ ಖದರ್ ತೋರಿಸಿದ್ದಾರೆ.

ಕ್ಲಿನ್ ಸ್ವೀಪ್ ಮಾಡಿದ ಸವದಿ ಪ್ಯಾನೆಲ್
ಅಥಣಿಯ ಕೃಷ್ಣಾ ಸರ್ಕಾರಿ ಸಕ್ಕರೆ ಸಂಘದ ನಿರ್ದೇಶಕರ ಆಯ್ಕೆ ಸಮರವು ಜಾರಕಿಹೊಳಿ ಸಹೋದರರ ವರ್ಸಸ್ ಲಕ್ಷ್ಮಣ ಸವದಿ ಬಣದ ನಡುವೆ ಅಗ್ನಿಪರೀಕ್ಷೆಯಾಗಿದ್ದು, ಸವದಿ ಬಣಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. ಒಟ್ಟು 12 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ರೈತ ಸಹಕಾರಿ ಪ್ಯಾನೆಲ್ 12 ಸ್ಥಾನಗಳನ್ನೂ ಗೆದ್ದು ಪೆನಲ್ ಕ್ಲೀನ್ ಸ್ವೀಪ್’ ಮಾಡಿದೆ. ಕೃಷ್ಣಾ ಸಹಕಾರಿ ಸಂಘದ ಹಾಲಿ ಅಧ್ಯಕ್ಷರೂ ಆಗಿರುವ ಪರಪ್ಪ ಸವದಿ ಅವರು ನೇತೃತ್ವದ ಪ್ಯಾನೆಲ್ ಈ ಭಾರಿ ಜಯಭೇರಿ ಬಾರಿಸಿದ್ದು, ಸ್ಪರ್ಧೆಯಲ್ಲಿದ್ದ ರಮೇಶ್ ಜಾರಕಿಹೊಳಿ ಬೆಂಬಲಿತ ‘ಸ್ವಾಭಿಮಾನ ರೈತ ಪ್ಯಾನೆಲ್’ಗೆ ಬಾರಿ ಹಿನ್ನಡೆಯುಂಟಾಗಿದೆ.
ತೀವ್ರ ಕುತುಹಲಕ್ಕೆ ಕಾರಣವಾಗಿದ್ದ ಚಿಕ್ಕೋಡಿ ಹಾಗೂ ಅಥಣಿಯಲ್ಲಿ ನಡೆದ ಎರಡು ಪ್ರಮುಖ ಸಹಕಾರಿ ಸಂಘಗಳ ಚುನಾವಣಾ ಫಲಿತಾಂಶಗಳು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ವಿಶೇಷವಾಗಿ, ಅಥಣಿ ಕೃಷ್ಣಾ ಸಹಕಾರಿ ಸಕ್ಕರೆ ಸಂಘದ ಚುನಾವಣೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ರಮೇಶ್ ಜಾರಕಿಹೊಳಿ ಸಹೋದರರಿಗೆ ಭಾರಿ ಮುಖಭಂಗವಾಗಿದ್ದು, ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ‘ರೈತ ಸಹಕಾರಿ ಪ್ಯಾನೆಲ್’ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.
ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ಗೆ ಹಿನ್ನೆಡೆ
ಇದರೊಂದಿಗೆ ಬೆಳಗಾವಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರಿಗೆ (Jarkiholi Brothers) ಮತ್ತೊಮ್ಮೆ ಹಿನ್ನೆಡೆಯಾಗಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಕತ್ತಿ ಕುಟುಂಬದ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹಿನ್ನಡೆ ಅನುಭವಿಸಿದರೆ ಈಗ ಅವರ ಸಹೋದರ ರಮೇಶ್ ಜಾರಕಿಹೊಳಿ (Ramesh Jarkiholi) ಲಕ್ಷ್ಮಣ ಸವದಿಗೆ ಸೆಡ್ಡು ಹೊಡೆದು ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ.
ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಸಾಧಿಸಲು ಹೊರಟ್ಟಿದ್ದ ಜಾರಕಿಹೊಳಿ ಬ್ರದರ್ಸ್ಗೆ ಮುಖಭಂಗವಾದಂತಾಗಿದೆ.